ಕೋಲ್ಕತ್ತ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ 20 ಸಂಸದರು ಎನ್ ಡಿಎಗೆ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತ ನೀಡಿದ್ದಾರೆ.
ಸಂಸದರು ತಮ್ಮ ನಿಲುವನ್ನು ಲೋಕಸಭಾ ಸ್ಪೀಕರ್ ಡಾ. ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ಬೆಂಬಲ ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಮತ ಪಕ್ಷವನ್ನು ಇಬ್ಭಾಗ ಮಾಡುವತ್ತ ಸಾಗಿದೆ. ಇದೀಗ ಟಿಎಂಸಿಯ 28 ಲೋಕಸಭಾ ಸದಸ್ಯರ ಪೈಕಿ 20 ಮಂದಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಬೆಂಬಲ ಘೋಷಿಸಿದ್ದಾರೆ.
ಟಿಎಂಸಿಯಲ್ಲಿ 28 ಸಂಸದರು ಮತ್ತು 12 ಮಂದಿ ರಾಜ್ಯಸಭಾ ಸದಸ್ಯರಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕಾಕೋಲಿ ಘೋಷ್, , ಲೋಕಸಭಾ ಸ್ಪೀಕರ್‌ಗೆ ಪತ್ರ ನೀಡಲಾಗಿದ್ದು, ಕೇಂದ್ರದ ಆಡಳಿತಾರೂಢ ಎನ್‌ಡಿಎಗೆ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
‘ನಾನೂ ಸೇರಿದಂತೆ ಸುಮಾರು 20 ಸಂಸದರು ಎನ್‌ಡಿಎ ಬೆಂಬಲಿಸುವ ತಮ್ಮ ನಿರ್ಧಾರದ ಕುರಿತಂತೆ ಲೋಕಸಭಾ ಸ್ಪೀಕರ್‌ಗೆ ಪತ್ರದಲ್ಲಿ ತಿಳಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಮುಖ್ಯಸಚೇತಕರಾಗಿ ಮುಂದುವರಿಯುವುದಾಗಿ ಹೇಳಿದ ಅವರು, ಸಂಸದರ ಜೊತೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಟಿಎಂಸಿ ಪಕ್ಷದ ಆಂತರಿಕ ಬೇಗುದಿ ಬಹಿರಂಗಗೊಂಡು ಹಲವು ಹಿರಿಯ ನಾಯಕರ ರಾಜೀನಾಮೆ, ವಿಧಾನಸಭೆಯಲ್ಲಿ ಬಂಡಾಯ ಬಣದ ನಾಯಕ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದೂ ಸೇರಿದಂತೆ ಇವೇ ಮುಂತಾದ ಬೆಳವಣಿಗೆಗಳ ನಡುವೆ ಟಿಎಂಸಿ ಸಂಸದರು ಈ ನಿಲುವು ತಳೆದಿದ್ದಾರೆ.



