ನವದೆಹಲಿ: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದವ ವಿರುದ್ಧ ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ತಿಳಿಸಿದೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗೆ ಜೂನ್ 25ರೊಳಗೆ ವರದಿ ನೀಡುವಂತೆ ಸೂಚಿಸಿದೆ.
ಮಂಗಳವಾರ ನಿತಿನ್ ನವೀನ್ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಅಡ್ಡ ಮತನಾದ ಬಗ್ಗೆ ಅಧ್ಯಕ್ಷರಿಗೂ ಅವರದೇ ಆದ ಮಾಹಿತಿ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರು ಅನ್ಯಾಯ ಮಾಡಿದ್ದಾರೋ, ದ್ರೋಹ ಎಸಗಿದ್ದಾರೋ ಅವರ ವಿರುದ್ಧ ಕಠಿಣ ನಿರ್ಣಯ ಮಾಡಲೇಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂದರು.
ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಂಘಟನಾತ್ಮಕ ಸಲಹೆಗಳನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಲು ತಿಳಿಸಿದ್ದಾಗಿ ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಅಡ್ಡ ಮತದಾನ ಸಂಬಂಧ ಅಂಕಿಅಂಶಗಳು ರಾಷ್ಟ್ರೀಯ ಅಧ್ಯಕ್ಷರ ಬಳಿ ಇದೆ. ಯಾರು ಈ ಥರ ಮಾಡಿರಬಹುದೆಂಬ ಅಂಕಿ ಅಂಶಗಳು ಅವರ ಬಳಿ ಇವೆ. ನಾವು ಕೊಟ್ಟ ಮಾಹಿತಿ ಮೇರೆಗೆ ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ, ಮೋಸ ಮಾಡಿದವರಿಗೆ ಸರಿಯಾದ ಪಾಠ ಕಲಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವಿವರ ನೀಡಿದರು.
ಪಕ್ಷವನ್ನು ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವ ದೃಷ್ಟಿಯಿಂದ ಒಗ್ಗಟ್ಟಿನಿಂದ, ಒಳ್ಳೆಯ ರೀತಿಯಿಂದ ಮುನ್ನಡೆಯುವಂತೆ ತಿಳಿಸಿದ್ದಾಗಿ ಹೇಳಿದರು. ಅಡ್ಡ ಮತದಾನ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರದ ನಾಯಕರು ತಿಳಿಸಿದ್ದಾರೆ ಎಂದರು.



