ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ 2443 ಕೋಟಿ ರೂ. ಹಣವನ್ನು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದು ಇನ್ನು ಮೂರ್ನಾಲ್ಕು ದಿನದಲ್ಲಿ ಕುಟುಂಬದ ಯಜಮಾನಿಯರಿಗೆ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಜಮೆ ಆಗಲಿದೆ.
ಇದುವರೆಗೂ 62,000 ರೂ. ಹಣ ಮನೆಯಜಮಾನಿಯರ ಖಾತೆಗೆ ತಲುಪಿದ್ದು ಇದೀಗ 32ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಪ್ರತಿ ಮನೆಯ ಯಜಮಾನಿಯರಿಗೆ ತಲಾ 64,000 ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ತಲುಪಿಸಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.
ಜಿಬಿಎ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಯರಿಗೆ ತಲಾ 64 ಸಾವಿರ ರೂ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದರ ಜೊತೆಗೆ, ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಗಳವರೆಗೆ ಉಚಿತ ನೀಡಲಾಗುತ್ತಿದೆ. ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ 1 ಲಕ್ಷ 46 ಸಾವಿರದ 443 ಕೋಟಿ ಹಣವನ್ನು ಖರ್ಚು ಮಾಡಿದೆ. ಇದರಿಂದ ಪ್ರತಿ ಕುಟುಂಬಕ್ಕೆ ಸರಾಸರಿ 5 ರಿಂದ 6 ಸಾವಿರ ಹಣ ಉಳಿತಾಯವಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು, ದುರುಪಯೋಗ ಆಗುವುದನ್ನು ತಡೆಯುವ ಉದ್ದೇಶದಿಂದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಲ್ಲಿ 1,95,224 ಫಲಾನುಭವಿಗಳು ಮೃತಪಟ್ಟಿದ್ದು ಅವರ ಖಾತೆಗೆ ಸುಮಾರು 115 ಕೋಟಿ ರೂ. ಹಣ ಸಂದಾಯವಾಗಿದೆ. ಗೃಹಜ್ಯೋತಿ ಯೋಜನೆಯಡಿ ನೀಡಲಾಗುವ ವಿದ್ಯುತ್ ಅನ್ನು ವಾಣಿಜ್ಯ ಬಳಕೆಗೆ ಬಳಸಿಕೊಳ್ಳುತ್ತಿರುವುದನ್ನು ತಡೆಯುವ ಉದ್ದೇಶದಿಂದ ಯೋಜನೆ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದರು.
1.24 ಕೋಟಿ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಉಚಿತವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ವಾರ್ಡ್ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ, ಗ್ಯಾರಂಟಿ ಉತ್ಸವಗಳನ್ನು ನಡೆಸಬೇಕು ಎಂದು ಕರೆಕೊಟ್ಟರು.
ಮೃತರ ಖಾತೆಗೆ ಹಣ ಸಂದಾಯವಾಗುತ್ತಿರುವುದನ್ನು ತಡೆಯಲು ಮೃತ ಫಲಾನುಭವಿಗಳ ಹೆಸರನ್ನು 15 ದಿನದಲ್ಲಿ ಪಟ್ಟಿಯಿಂದ ಕೈಬಿಡುವಂತೆ ಸರ್ಕಾರ ಶೀಘ್ರದಲ್ಲೇ ಮಾರ್ಗಸೂಚಿ ರಚನೆ ಮಾಡಲಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಇಂದಿರಾ ಕಿಟ್ ವಿತರಣೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿ ಇದೆ. ನ್ಯಾಯಬೆಲೆ ಅಂಗಡಿಗಳ ಮಾಸಿಕ ಸಭೆ ನಡೆಸಬೇಕು. ವೇಳಾಪಟ್ಟಿ ಪ್ರಕಟಣೆ ಮಾಡಬೇಕು. ದಿನಪೂರ್ತಿ ತೆರೆಯುವಂತೆ ರಾಜ್ಯದ 22 ಸಾವಿರ ನ್ಯಾಯಬೆಲೆ ಅಂಗಡಿಗಳಿಗೂ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಬಿಎ ಅಧ್ಯಕ್ಷ ಕೃಷ್ಣಪ್ಪ, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷೆ ಲಾವಣ್ಯ ನರಸಿಂಹಮೂರ್ತಿ ಹಾಗೂ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಸಭೆಗೆ ಆಗಮಿಸದವರಿಗೆ ನೋಟಿಸ್
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ನೀಡಬೇಕು. ಸಭೆಗೆ ಆಗಮಿಸದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ಸಹ ತರಲಾಗುವುದು. ಗೃಹಜ್ಯೋತಿ ಯೋಜನೆಯಡಿ ಅಪಾರ್ಟ್ಮೆಂಟ್ ನಿವಾಸಿಗಳು ಸಹ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಮನೆ ಸರ್ವೆಗೆ ತೆರಳಿದರೆ ಅಪಾರ್ಟ್ಮೆಂಟ್ ಸಂಘದವರು ಸಮಿತಿ ಸದಸ್ಯರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಕುರಿತು ಸರ್ಕಾರದ ಹಂತದಲ್ಲೇ ಮಾರ್ಗಸೂಚಿ ರಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ದಿನೇಶ್ ಗೂಳಿಗೌಡ ಅವರು ಹೇಳಿದರು.
ಫಲಾನುಭವಿಗಳ ವಾಟ್ಸಪ್ ಗ್ರೂಪ್ ರಚಿಸಿ
ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವಾಗಬೇಕು. ಫಲಾನುಭವಿಗಳ ವಾಟ್ಸಪ್ ಗ್ರೂಪ್ ರಚಿಸಿ ಕುಂದುಕೊರತೆಗಳನ್ನು ಆಲಿಸಬೇಕು. ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲು, ಯೋಜನೆಗಳ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಪರಿಷ್ಕರಣೆ ಪ್ರಗತಿ
ಜಿಬಿಎ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ತ್ವರಿತವಾಗಿ ಸಾಗುತ್ತಿದೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.90ರಷ್ಟು ಪೂರ್ಣವಾಗಿದ್ದರೆ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 47.68% ರಷ್ಟು ಮುಕ್ತಾಯವಾಗಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಷ್ಕರಣೆ ಕಾರ್ಯ 55% ಆಗಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 52% ಪರಿಷ್ಕರಣೆ ಆಗಿದೆ.



