Sunday, June 7, 2026
Google search engine
Homeಕಾನೂನುಜಿಪಂ, ತಾಪಂ ಚುನಾವಣೆ: ಮೀಸಲಾತಿ ನಿಗದಿಗೆ 8 ವಾರ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

ಜಿಪಂ, ತಾಪಂ ಚುನಾವಣೆ: ಮೀಸಲಾತಿ ನಿಗದಿಗೆ 8 ವಾರ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

ಬೆಂಗಳೂರು: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿ.ಪಂ ಹಾಗೂ ತಾ.ಪಂಗಳ ಚುನಾವಣೆ ನಡೆಸಲು ವಿಳಂಬ ಆಗಿರುವುದಕ್ಕೆ ಹೈಕೋರ್ಟ್ ಮುಂದೆ ಕ್ಷಮೆಯಾಚಿಸಿರುವ ರಾಜ್ಯ ಸರ್ಕಾರ, ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತೆ 8 ವಾರಗಳ ಕಾಲಾವಕಾಶ ಕೇಳಿದೆ.

ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ 12 ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು 2023ರ ಡಿಸೆಂಬರ್ 19ಕ್ಕೆ ರಾಜ್ಯ ಸರ್ಕಾರ ಹೈಕೋರ್ಟ್​​‌ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ನ್ಯಾಯಾಲಯಕ್ಕೆ ಕೊಟ್ಟ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ ಎಂದು ಆಕ್ಷೇಪಿಸಿ, ಸ್ವತಃ ರಾಜ್ಯ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ 2024ರಲ್ಲಿ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್, ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಮೀಸಲಾತಿ ನಿಗದಿ ಪ್ರಕ್ರಿಯೆಗೆ ವಿಳಂಬವಾದ ಕಾರಣಗಳನ್ನು ವಿವರಿಸಿದ್ದಾರೆ. ಸರ್ಕಾರದಿಂದ ಉದ್ದೇಶಪೂರ್ವಕವಾಗಿ ವಿಳಂಬವಾಗಿಲ್ಲ, ನ್ಯಾಯಾಲಯದ ಆದೇಶ ಪಾಲನೆಯಲ್ಲೂ ವಿಳಂಬ ಆಗಿಲ್ಲ. ಆದರೆ, ಆಗಿರುವ ವಿಳಂಬಕ್ಕೆ ಕ್ಷಮೆಯಾಚಿಸುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ಕಂದಾಯ ಇಲಾಖೆಯು ವಿಜಯಪುರ ಜಿಲ್ಲೆಯ ನಾಲ್ಕು ಹಾಗೂ ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ಗಡಿಗಳನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿತ್ತು. ಹಾಗಾಗಿ ಈ ಎರಡು ಜಿಲ್ಲೆಗಳ ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಬೇಕಾಯಿತು. ಅದರಂತೆ ಈಗಾಗಲೇ ವಿಜಯಪುರ ಜಿಲ್ಲೆಯ ನಾಲ್ಕು ತಾಲೂಕುಗಳ ತಾ.ಪಂ, ಜಿ.ಪಂ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಲಾಗಿದೆ.

ಉಳಿದಂತೆ ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ತಾ.ಪಂ, ಜಿ.ಪಂ ಕ್ಷೇತ್ರಗಳ ಗಡಿಗಳ ಮರುನಿಗದಿ ಹಾಗೂ ಮೀಸಲಾತಿ ನಿಗದಿಗೆ 12 ವಾರಗಳ ಕಾಲಾವಕಾಶ ಬೇಕಾಗಿದೆ. ಇದನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ತಾ.ಪಂ, ಜಿ.ಪಂ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಂಡಿದ್ದು, ಅವುಗಳಿಗೆ ಮೀಸಲಾತಿ ನಿಗದಿಪಡಿಸಲು 8 ವಾರ ಕಾಲಾವಕಾಶ ಬೇಕು ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟಂಬರ್ 11ಕ್ಕೆ ಮುಂದೂಡಿತು.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಮೀಸಲು ನಿಗದಿಗೆ 30 ದಿನ ಕಾಲಾವಾಕಾಶ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಅವಧಿ ಮುಗಿದ ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಪೂರಕವಾಗಿ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಗ್ರಾ.ಪಂ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಈವರೆಗೆ ಆಗಿರುವ ಪ್ರಗತಿಯ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಗೆ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮುಂದುವರೆದು ಸದಸ್ಯ ಸ್ಥಾನಗಳಿಗೆ ಪ್ರವರ್ಗವಾರು ಮೀಸಲಾತಿಯನ್ನು 30 ದಿನಗಳಲ್ಲಿ ನಿಗದಿಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿತು. ರಾಜ್ಯ ಚುನಾವಣಾ ಆಯೋಗವನ್ನು ಹಿರಿಯ ವಕೀಲ ಕೆ.ಎನ್.ಫಣೀಂದ್ರ ಪ್ರತಿನಿಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments