ಬೆಂಗಳೂರು: ಕಲ್ಯಾಣ ಮಂಟಪಕ್ಕೆ ಬಂದು ನಕಲಿ ಕೀ ಬಳಿಸಿ ಮದುವೆ ಕಾರ್ಯದಲ್ಲಿದ್ದ ವಧುವಿನ ಕೊಠಡಿ ಪ್ರವೇಶಿಸಿ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ ಅರೋಪಿಯನ್ನು ಬಂಧಿಸುವಲ್ಲಿ ನೆಲಮಂಗಲ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಮೂಲದ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ (25) ಬಂಧಿತ ಆರೋಪಿ. ಕಳವು ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಳೆದ ಮೇ 14 ಮತ್ತು 15 ರಂದು ನಗರದ ಎಂವಿಎಂ ಕಲ್ಯಾಣ ಮಂಟಪದಲ್ಲಿ ಉದ್ಯಮಿ ವೆಂಕಟೇಶ್ ಅವರ ಮಗಳ ಮದುವೆ ಕಾರ್ಯ ನಡೆದಿತ್ತು. ಮದುವೆ ಸಮಾರಂಭದಲ್ಲಿ ತಮ್ಮನ ಮಗಳು ನಯನಾ ಬಂದಿದ್ದರು. ಮೇ 15ರ ಬೆಳಗ್ಗೆ 11 ಗಂಟೆ ಸಮಯದಲ್ಲಿ ನಯನಾ ಕಲ್ಯಾಣ ಮಂಟಪದಲ್ಲಿನ ವಧುವಿನ ಕೊಠಡಿಯಲ್ಲಿನ ಸೂಟ್ ಕೇಸ್ನಲ್ಲಿ ಸಮಾರು 3.5 ಲಕ್ಷ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಚೈನ್ ಇಟ್ಟು ಮದುವೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದರು.
ಮದುವೆ ಮುಗಿದ ನಂತರ ಮನೆಗೆ ಬಂದು ಸೂಟ್ ಕೇಸ್ ಪರಿಶೀಲನೆ ಮಾಡಿದಾಗ ಚಿನ್ನದ ಚೈನ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ವೆಂಕಟೇಶ್ ಅವರು ಮೇ 15ರಂದು ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಟೌನ್ ಪೊಲೀಸರು ಮಂಟಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದೆ. ನಕಲಿ ಕೀ ಬಳಸಿ ಹೆಣ್ಣಿನ ಕೊಠಡಿಗೆ ಹೋಗಿ ಬರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಪತ್ತೆಯಾಗಿತ್ತು. ಮೇ 16 ರಂದು ಆರಕ್ಷಕ ನಿರೀಕ್ಷಕ ಭರತ್ ಗೌಡ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಎಸ್‌ಐ ರಘು ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ದಾವಣಗೆರೆಯಲ್ಲಿ ಕುಖ್ಯಾತ ಕಳ್ಳ ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ನನ್ನು ಬಂಧಿಸಿದೆ.
ಬಂಧಿತನಿಂದ 3.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಜಪ್ತಿ ಮಾಡಲಾದ 40 ಗ್ರಾಂ ತೂಕದ ಚಿನ್ನದ ಸರವನ್ನ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಜು ಮಸ್ತಿಗೆ ಕಳವು:
ಆರೋಪಿ ಕಿರಣ್ ಮೋಜು ಮಸ್ತಿಗಾಗಿ ಕಳ್ಳತನ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಅಂದು ಕಲ್ಯಾಣ ಮಂಟಪದ ವಧುವಿನ ಕೊಠಡಿಯಲ್ಲಿಟ್ಟಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿದ್ದ ಕಿರಣ್, ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದ.
ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದರಿಂದ ಈತನ ಹೆಸರು ಕಿರಣ್ ಅಲಿಯಾಸ್ ಚೌಲ್ಟ್ರಿ ಕಿರಣ್ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದ. ಅಲ್ಲದೇ ಆರೋಪಿಯು ದಾವಣಗೆರೆ, ಹುಬ್ಬಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಕಳವು, ದರೋಡೆ, ಮನೆಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



