ಕನ್ನಡ ವಿರೋಧಿ ಹೇಳಿಕೆ ನೀಡಿದ ನೀವು ಕ್ಷಮೆ ಕೇಳಲು ಏನು ಸಮಸ್ಯೆ? ಕ್ಷಮೆ ಕೇಳುವುದಿಲ್ಲ ಎಂದು ಹೇಳುವುದಾದರೆ ಕರ್ನಾಟಕದಲ್ಲಿ ಸಿನಿಮಾ ಯಾಕೆ ಬಿಡುಗಡೆ ಮಾಡಬೇಕು ಎಂದು ನಟ ಕಮಲ್ ಹಾಸನ್ ಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅನುಮತಿ ಕೋರಿ ನಟ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಪೀಠ ಬುಧವಾರ ಕಮಲ್ ಹಾಸನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಕನ್ನಡಿಗರ ಭಾವನೆಗೆ ಧಕ್ಕೆ ತಂದ ನೀವು, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಯಾಕೆ ಮಾಡಬೇಕು? 300 ಕೋಟಿ ರೂ. ಸಿನಿಮಾ ಎಂದು ಹೇಳುತ್ತಿರಾ? ಕ್ಷಮೆ ಕೇಳಿದರೆ ಎಲ್ಲಾ ಸಮಸ್ಯೆ ಬಗೆ ಹರಿಯುತ್ತದೆ ಎಂದು ಗೊತ್ತಿದ್ದರೂ ಕ್ಷಮೆ ಕೇಳಲು ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.
1950ರಲ್ಲಿ ರಾಮಗೋಪಾಲಾಚಾರಿ ಎಂಬುವವರು ಇದೇ ರೀತಿ ಹೇಳಿಕೆ ನೀಡಿ ನಂತರ ಕ್ಷಮೆ ಕೋರಿದ್ದರು. ಈಗ ನೀವು ಕ್ಷಮೆ ಕೇಳುವುದಿಲ್ಲ ಎಂದು ಹೇಳುತ್ತಿದ್ದೀರಿ. ಮತ್ತು ನಿಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದೀರಿ. ಹಾಗಾದರೆ ಸಿನಿಮಾ ಬಿಡುಗಡೆಗೆ ನಾವು ಯಾಕೆ ಪೊಲೀಸ್ ರಕ್ಷಣೆ ಕೊಡಬೇಕು ಎಂದು ಕೋರ್ಟ್ ಪ್ರಶ್ನಿಸಿತು.
ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿರುವ ಹೈಕೋರ್ಟ್, ನಿಮ್ಮ ನಿಲುವು ಸ್ಪಷ್ಟವಾಗಿ ತಿಳಿಸುವಂತೆ ಕಮಲ್ ಹಾಸನ್ ಪರ ವಕೀಲರಿಗೆ ಸೂಚಿಸಿದರು.



