ನಾಯಕಿ ಜೆಮಿಹಾ ರೋಡ್ರಿಗಜ್ ಸೇರಿದಂತೆ ಬ್ಯಾಟ್ಸ್ ಮನ್ ಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಬ್ಲೂಪಿಎಲ್ ಟಿ-20 ಟೂರ್ನಿಯ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್ ಗಳ ಸವಾಲೊಡ್ಡಿದೆ.
ವಡೋದರಾದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಆಹ್ವಾನ ಸ್ವೀಕರಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 203 ರನ್ ಸಂಪಾದಿಸಿತು.
ಡೆಲ್ಲಿ ಕ್ಯಾಪಿಟಲ್ಸ್ 4 ಬಾರಿ ಫೈನಲ್ ಪ್ರವೇಶಿಸಿದ್ದರೂ ಒಂದೂ ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ 2004ರ ಚಾಂಪಿಯನ್ ಆರ್ ಸಿಬಿಗೆ ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯಬೇಕಾದರೆ ಕಠಿಣ ಸವಾಲು ಮೆಟ್ಟಿ ನಿಲ್ಲಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಅಗ್ರ ಕ್ರಮಾಂಕದ ಬ್ಯಾಟ್ಸ್ ವುಮನ್ ಗಳು ಉತ್ತಮವಾಗಿ ಆಡಿದರು. ನಾಯಕಿ ಜೆಮಿಹಾ ರೋಡ್ರಿಗಜ್ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮುನ್ನಡೆಸಿದರು. ಜೆಮಿಹಾ 37 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 57 ರನ್ ಬಾರಿಸಿ ಔಟಾದರು.
ಡೆಲ್ಲಿ ತಂಡಕ್ಕೆ ಲಿಜೆಲ್ ಲೀ (37) ಮತ್ತು ಶೆಫಾಲಿ ಶರ್ಮ (20) ಮೊದಲ ವಿಕೆಟ್ ಗೆ 49 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಲೌರಾ ವೊಲ್ವಾರ್ಟ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 44 ರನ್ ಚಚ್ಚಿದರು. ಲೌರಾ ಮತ್ತು ಜೆಮಿಹಾ ಮೂರನೇ ವಿಕೆಟ್ ಗೆ 76 ರನ್ ಜೋಡಿಸಿದರು.
ಕೊನೆಯ ಹಂತದಲ್ಲಿ ಗುಡುಗು ಸಿಡಿಲಿನ ಆಟವಾಡಿದ ಚಿನೆಲ್ಲೆ ಹೆನ್ರಿ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 35 ರನ್ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಆರ್ ಸಿಬಿ ಬೌಲಿಂಗ್ ಸಾಧಾರಣವಾಗಿದ್ದು, ಸಯ್ಯಾಲಿ, ಅರುಂಧತಿ, ನಾದಿನ್ ಡಿ ಕ್ಲಾರ್ಕ್ ತಲಾ 1 ವಿಕೆಟ್ ಗಳಿಸಿದರು.



