ಬೆಂಗಳೂರು: ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ಸೂಚನೆ ಹೊರಡಿಸಿದ ನಂತರವೂ ರಾಜ್ಯಾದ್ಯಂತ ಸಂಚರಿಸುತ್ತಿದ್ದ 500ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ ಆದೇಶವನ್ನು ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ ಜೂನ್ 15ರಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ರ್ಯಾಪಿಡೊ, ಉಬೇರ್ ಮತ್ತು ಓಲಾ ಕಂಪನಿಗಳಿಗೆ ಸೂಚಿಸಲಾಗಿತ್ತು.
ಹೈಕೋರ್ಟ್ ಆದೇಶದ ಹೊರತಾಗಿಯೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ಪತ್ತೆ ಹಚ್ಚಿದ ಅಧಿಕಾರಿಗಳು 500ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರದಲ್ಲಿ ಬೆಂಗಳೂರು ವ್ಯಾಪ್ತಿಯ ಎಲ್ಲ ಸಾರಿಗೆ ಕಚೇರಿಗಳಲ್ಲಿ ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಬಿರುಸುಗೊಂಡಿತ್ತು. ಜ್ಞಾನಭಾರತಿ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ, ರಾಜಾಜಿನಗರ, ಯಶವಂತಪುರ, ಕೆ.ಆರ್. ಪುರಂ, ಜಯನಗರ ಸೇರಿದಂತೆ ಎಲ್ಲಾ RTO ಕಚೇರಿಗಳಲ್ಲಿ ನಿರೀಕ್ಷೆಗೂ ಮೀರಿ ಬೈಕ್ ಟ್ಯಾಕ್ಸಿಗಳನ್ನ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರ 100ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ವಶಪಡಿಸಿಕೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಬೈಕ್ ಮಾತ್ರವಲ್ಲ, ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ಕೂಡ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರ್ ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಇಲಾಖೆ, ನ್ಯಾಯಾಂಗ ನಿಂದನೆಯಡಿ ಕೇಸ್ ಕೂಡ ದಾಖಲು ಮಾಡುತ್ತಿದೆ. ವಾಹನಗಳನ್ನು ಜಪ್ತಿ ಮಾಡಿದ್ದೂ ಅಲ್ಲದೇ 2 ಸಾವಿರ ರೂ.ರಿಂದ 10 ಸಾವಿರ ರೂ.ಗಳವರೆಗೆ ದಂಡ ಅಥವಾ ಮೂರು ಗಳಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಮುಂದಾಗಲಿದೆ.
ಮೋಟಾರು ವಾಹನ ಕಾಯ್ದೆ1988 ಸೆಕ್ಷನ್ 3ರಡಿ ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸುವವರೆಗೂ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಈ ಹಿಂದೆ ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ಹಿನ್ನಲೆಯಲ್ಲಿ ಜೂನ್ 16 ರಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ಸಂಪೂರ್ಣ ಸ್ಥಗಿತಗೊಳಿಸುವಂತೆ ಸೂಚಿಸಿತ್ತು.
ರಾಜ್ಯ ಬೈಕ್ ಟ್ಯಾಕ್ಸಿ ಚಾಲಕರು ಸಿಎಂ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ರದ್ದು ಮಾಡದಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ನಿಷೇಧದಿಂದ ಆ ಕುಟುಂಬಗಳು ಸಂಕಷ್ಟಕ್ಕೀಡಾಗಲಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



