ಕೇಂದ್ರ ಸರ್ಕಾರ ಇದೇ ಮೊದಲ ಬಾರಿ ಹಮ್ಮಿಕೊಂಡಿರುವ ಜಾತಿ ಗಣತಿ ಜೊತೆಗೆ ಜನಗಣತಿ ಅಕ್ಟೋಬರ್ 1, 2026ರಿಂದ ಮಾರ್ಚ್ 1, 2027ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯ ಸೋಮವಾರ 2011ರ ನಂತರ ಮೊದಲ ಬಾರಿ ಹಮ್ಮಿಕೊಂಡಿರುವ ಜನಗಣತಿಯ ವಿವರಗಳನ್ನು ಪ್ರಕಟಿಸಿತು.
ಮೊದಲ ಹಂತದಲ್ಲಿ ಹೌಸ್ ಲಿಸ್ಟಿಂಗ್ ಆಪರೇಷನ್ ನಡೆಯಲಿದ್ದು, ಮನೆ ಮನೆಗೆ ತೆರಳಿ ಆಸ್ತಿ, ಕುಟುಂಬದ ಆದಾಯ, ಮನೆಯ ಪರಿಸ್ಥಿತಿ ಸೇರಿದಂತೆ ಇತರೆ ವಿವರಗಳನ್ನು ಸಂಗ್ರಹಿಸಲಾಗುವುದು. ಮತ್ತು ಇದೇ ಮೊದಲ ಬಾರಿ ಡಿಜಿಟಲ್ ಮಾಹಿತಿ ಸಂಗ್ರಹ ದಾಖಲಾಗಲಿದೆ.
ಎರಡನೇ ಹಂತದಲ್ಲಿ ಪಾಪ್ಯುಲೇಷನ್ ಎನ್ಯುಮರೇಷನ್ ಸಮೀಕ್ಷೆ ನಡೆಯಲಿದ್ದು, ಸಾಮಾಜಿಕ ಆರ್ಥಿಕ ಅಧ್ಯಯನ, ಸಾಂಸ್ಕೃತಿ ಮತ್ತು ಮನೆ ಹಾಗೂ ಕುಟುಂಬದ ಸದಸ್ಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುವುದು. ಏಪ್ರಿಲ್ ನಲ್ಲಿ ಜಾತಿಗಣತಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.
2027ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಜನಗಣತಿ ಜೊತೆಗೆ ಜಾತಿಗಣತಿ ಕೂಡ ಹಮ್ಮಿಕೊಳ್ಳಲು ಕಳೆದ ಏಪ್ರಿಲ್ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.



