ನವದೆಹಲಿ: ರಸ್ತೆಗಳಲ್ಲಿ ‘ಥರ್ಡ್ ಪಾರ್ಟಿ’ ವಿಮೆ ರಹಿತವಾಗಿ ಶೇ.56ರಷ್ಟು ವಾಹನಗಳು ಸಂಚರಿಸುತ್ತಿರುವುದು ಕಳವಳಕಾರಿ. ಇಂತಹ ವಾಹನಗಳಿಗೆ ಇಂಧನ ಪೂರೈಕೆ ನಿರಾಕರಿಸುವಂತಹ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಮಹತ್ವದ ಸೂಚನೆ ನೀಡಿದ.ೆ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲು ನ್ಯಾಯಾಲಯ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ (ಐಆಡಿಎ) ನಿರ್ದೇಶನ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಮತ್ತು ಟೋಲ್ ಪ್ಲಾಜಾಗಳಲ್ಲಿನ ಸುದೀರ್ಘ ಸಾಲುಗಳ ಸಮಸ್ಯೆಯನ್ನು ಉಲ್ಲೇಖಿಸಿದ ಸರ್ವೋಚ್ಚ ನ್ಯಾಯಾಲಯ, ಟೋಲ್ ಪ್ಲಾಜಾಗಳ ಬಳಿ ವಾಹನಗಳನ್ನು ತಡೆದು ತಪಾಸಣೆ ನಡೆಸುವ ಬದಲು ಸ್ವಯಂಚಾಲಿತ ವಾಹನ ಗುರುತಿಸುವಿಕೆ ವ್ಯವಸ್ಥೆ ಜಾರಿಗೆ ತರಲು ಸೂಚಿಸಿದೆ.
ಮೋಟಾರು ವಾಹನ ಕಾಯ್ದೆಯಡಿ ಪ್ರತಿಯೊಂದು ವಾಹನಕ್ಕೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದರೂ, ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲದಿರುವುದಕ್ಕೆ ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಕಳವಳ ವ್ಯಕ್ತಪಡಿಸಿತು.
ಹಣಕಾಸು ಸ್ಥಾಯಿ ಸಮಿತಿಯ 2024-25ರ ವರದಿ ಪ್ರಕಾರ, ಭಾರತದ ರಸ್ತೆಗಳಲ್ಲಿ ಸಂಚರಿಸುವ ಶೇ 56ರಷ್ಟು ವಾಹನಗಳು ಯಾವುದೇ ವಿಮೆ ಹೊಂದಿಲ್ಲದಿರುವುದು ದಿಗ್ಧಮೆ ಹುಟ್ಟಿಸುವಂತಿದೆ ಎಂದು ಪೀಠ ಹೇಳಿದೆ.
ಇಂಧನ ನಿರಾಕರಿಸುವುದರಿಂದ ಎರಡು ರೀತಿಯ ಪ್ರಯೋಜನಗಳು ಸಿಗುತ್ತವೆ. ವಿಮೆ ಮಾಡದ ಅಥವಾ ನೋಂದಾಯಿಸದ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಎರಡನೆಯದಾಗಿ, ಈ ವಾಹನಗಳ ಮಾಲೀಕರು ಮಾನ್ಯ ವಿಮೆ ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ ಎಂದು ಪೀಠ ಹೇಳಿದೆ.
ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಸುಪ್ರೀಂ ಕೋರ್ಟ್, ಹೊಸ ಕಾರುಗಳಿಗೆ ನೋಂದಣಿ ಸಮಯದಲ್ಲಿ ನಾಲ್ಕು ವರ್ಷಗಳ ಹಾಗೂ ಹೊಸ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.
ಇದುವರೆಗೆ ಹೊಸ ಕಾರುಗಳು ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳು ಐದು ವರ್ಷ ಥರ್ಡ್ ಪಾರ್ಟಿ ವಿಮೆ ಹೊಂದುವುದು ಕಡ್ಡಾಯವಾಗಿತ್ತು. ಈ ಅವಧಿಯನ್ನು ಸುಪ್ರೀಂ ಕೋರ್ಟ್ ಒಂದು ವರ್ಷ ಹೆಚ್ಚಿಸಿದೆ.



