ಬೆಂಗಳೂರಿನ ಕೋಗಿಲು ಲೇಔಟ್ ನಂತರ ಗುರುವಾರ ಥಣಿಸಂದ್ರದಲ್ಲಿ ಅನಧಿಕೃತ ಶೆಡ್ ಹಾಗೂ ಮನೆಗಳನ್ನು ನೆಲಸಮಗೊಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು 100 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದೆ.
ಹೈಕೋರ್ಟ್ ಆದೇಶ ಮೇರೆಗೆ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಥಣಿಸಂದ್ರದಲ್ಲಿ 22 ಮನೆ, ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾರ್ ಗ್ಯಾರೇಜ್, ಗೋಡೌನ್, ಶೆಡ್ ಗಳನ್ನು ತೆರವುಗೊಳಿಸಲಾಗಿದೆ.
22 ಮನೆಗಳಲ್ಲಿ ಇರುವವರೆಲ್ಲ ಬಾಡಿಗೆದಾರರು ಎಂದು ತಿಳಿದು ಬಂದಿದ್ದು, ಮನೆಗಳ ಮಾಲೀಕರು ಯಾರು, ಎಲ್ಲಿಯವರು, ಈಗ ಎಲ್ಲಿದ್ದಾರೆ ಎಂಬ ಯಾವ ಮಾಹಿತಿಯೂ ಸಿಕ್ಕಿಲ್ಲ.
ಥಣಿಸಂಧ್ರದ ಎಸ್‌ಆರ್‌ಕೆ ಲೇಔಟ್‌ನಲ್ಲಿ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದು, ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಯಾವುದೇ ನೋಟಿಸ್ ಕೊಡದೇ ತೆರವು ಮಾಡಿದ ಆರೋಪವೂ ಕೇಳಿ ಬಂದಿದೆ.
ಮನೆಯ ವಸ್ತುಗಳೆಲ್ಲಾ ಬೀದಿಪಾಲಾಗಿದ್ದು, ಪುಟ್ಟ ಮಕ್ಕಳನ್ನು ಅಂಗೈಯಲ್ಲಿ ಹಿಡಿದು ತಾಯಂದಿರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಇನ್ನು ಮನೆ ತೆರವು ವೇಳೆ ಕೈಯಲ್ಲಿ ವಿಷದ ಬಾಟಲಿ ಹಿಡಿದ ಕುಟುಂಬವೊಂದು ಆತ್ಮಹತ್ಯೆ ಬೆದರಿಕೆ ಹಾಕಿದೆ. ನಾವು 53 ಲಕ್ಷ ಕೊಟ್ಟು ಸ್ವಂತ ಮನೆ ಖರೀದಿ ಮಾಡಿದ್ದೇವೆ. ಇ-ಖಾತಾ, ದಾಖಲೆ ಎಲ್ಲಾ ಇದೆ. ಹೀಗಿದ್ದರೂ ಮನೆ ತೆರವು ಮಾಡಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.



