ವಿವಾಹಿತೆ ಪ್ರಿಯಕರ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಅಪರಿಚಿತ ವೃದ್ಧನ ಕೊಲೆಗೈದು ಆತ್ಮಹತ್ಯೆ ನಾಟಕವಾಡಿ ಸಿಕ್ಕಿಬಿದ್ದ ಘಟನೆ ಗುಜರಾತ್ ನ ಕುಚ್ ಜಿಲ್ಲೆಯಲ್ಲಿ ನಡೆದಿದೆ.
ರಮಿ ಕೇಸರಿಯಾ ಮತ್ತು ಅನಿಲ್ ಗಂಗಲ್ ಜೊತೆಯಾಗಿ ಇರುವ ಉದ್ದೇಶದಿಂದ ಆತ್ಮಹತ್ಯೆ ನಾಟಕವಾಡಿ ಕುಟುಂಬದವರ ದಿಕ್ಕು ತಪ್ಪಿಸಲು ಗುರುತು ಪರಿಚಯವೇ ಇಲ್ಲದ ವ್ಯಕ್ತಿಯನ್ನು ಕೊಂದು ಶವ ಸುಟ್ಟು ಹಾಕಿದ್ದಾರೆ.
ಅಪರಿಚಿತ ವ್ಯಕ್ತಿಯ ಶವದ ಬಳಿ ರಮಿಯ ಮೊಬೈಲ್, ಬಟ್ಟೆ, ಪಾದರಕ್ಷೆ ಮತ್ತು ಗುರುತು ಚೀಟಿ ಇರಿಸಿ ರಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೆಯಲ್ಲಿ ಕತೆ ಹೇಳಿ ನಂಬಿಸಿದರು. ಕುಟುಂಬದವರು ಶವದ ಬಳಿ ಇದ್ದ ಗುರುತಿನ ಆಧಾರದ ಮೇಲೆ ರಮಿ ಶವ ಎಂದು ಒಪ್ಪಿಕೊಂಡಿದ್ದರು. ಪೊಲೀಸರು ಕೂಡ ಇದನ್ನೇ ನಂಬಿದ್ದರು.
ಜುಲೈ 3ರಂದು ಈ ಘಟನೆ ನಡೆದಿದ್ದು, ರಮಿ ಮತ್ತು ಅನಿಲ್ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಅನಿಲ್ ರಾಮಿಯ ಮನೆಗೆ ಬಂದು ಘಟನೆಯ ಮಾಹಿತಿ ಪಡೆದಂತೆ ನಾಟಕಟವಾಡಿ ಹೋಗಿದ್ದ.
ಸುಮಾರು 2 ತಿಂಗಳ ನಂತರ ಊರಿಗೆ ಮರಳಿದ ಅನಿಲ್ ಮತ್ತು ರಾಮಿ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದರು. ಅಲ್ಲದೇ ತಲೆಮರೆಸಿಕೊಂಡು ಓಡಾಡಲು ಹೆಚ್ಚು ದಿನ ಊರಿನಲ್ಲಿ ಆಗುವುದಿಲ್ಲ ಎಂದು ತಿಳಿದು ರಾಮಿ ಸೆಪ್ಟೆಂಬರ್ 27ರಂದು ಮನೆಗೆ ಮರಳಿ ತಂದೆಯ ಬಳಿ ವಿಷಯ ತಿಳಿಸಿದ್ದಾರೆ.
ರಾಮಿಯನ್ನು ಕ್ಷಮಿಸಲು ನಿರಾಕರಿಸಿದ ತಂದೆ ಪೊಲೀಸರಿಗೆ ದೂರು ನೀಡಿದ್ದೂ ಅಲ್ಲದೇ ಘಟನೆಯ ವಿವರಗಳನ್ನು ನೀಡಿದ್ದಾರೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನೈತಿಕ ಸಂಬಂಧಕ್ಕಾಗಿ ಪರಿಚಯವೇ ಇಲ್ಲದ ವ್ಯಕ್ತಿಗೆ ಆಮೀಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳುನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕಚ್ ಪಶ್ಚಿಮ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂದಾ ತಿಳಿಸಿದ್ದಾರೆ.