ತೆಲುಗು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ಕಸ್ತೂರಿ ಶಂಕರ್ ಅವರನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.
50 ವರ್ಷದ ಬಹುಭಾಷಾ ನಟಿ ಕಸ್ತೂರಿ ಶಂಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್, ದ್ವೇಷದ ಭಾಷಣ ಮಾಡುವ ಮುನ್ನ ಸೆಲೆಬ್ರೆಟಿಗಳು ಎರಡು ಬಾರಿ ಯೋಚಿಸಬೇಕು ಎಂದು ಸೂಚಿಸಿತ್ತು.
ನಟಿ ಕಸ್ತೂರಿ ಶಂಕರ್ ಕ್ಷಮೆಯಾಚಿಸಿದರೂ ನಿರಾಕರಿಸಿದ್ದ ಹೈಕೋರ್ಟ್, ನಿಮ್ಮ ವರ್ತನೆ ನೈಜವಾದುದು ಎಂದು ಅನಿಸುತ್ತಿಲ್ಲ. ದ್ವೇಷ ಭಾಷಣ ಮಾಡಿ ಪರಾರಿಯಾಗುವ ರೀತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ನಾನು ಯಾವುದೇ ಸಮುದಾಯದ ವಿರುದ್ಧ ಹೇಳಿಕೆ ನೀಡಿಲ್ಲ. ಬದಲಾಗಿ ಕೆಲವು ವ್ಯಕ್ತಿಗಳ ಮೇಲಿನ ವೈಯಕ್ತಿಕ ಅಭಿಪ್ರಾಯವಾಗಿತ್ತು ಎಂದು ಸಮಜಾಯಿಷಿ ನೀಡಿದ್ದ ನಟಿ, ನನ್ನ ಎಲ್ಲಾ ಹೇಳಿಕೆಗಳನ್ನು ವಾಪಸ್ ಪಡೆಯುತ್ತೇನೆ ಮತ್ತು ಬೇಷರತ್ ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.