ನ್ಯಾಯಾಲಯದ ಹೊರಗೆ ರಸ್ತೆ ಮಧ್ಯದಲ್ಲಿ ಹಾಡುಹಾಗಲೇ ವ್ಯಕ್ತಿಯೊಬ್ಬ ವಕೀಲನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಭೀಕರ ಘಟನೆ ಬೆಂಗಳೂರು ಹೊರವಲಯದ ಹೊಸೂರು ಬಳಿ ನಡೆದಿದೆ.
ಬೆಂಗಳೂರು ಹೊರವಲಯದಲ್ಲಿ ಹೊಸೂರಿನ ಕೋರ್ಟ್ ಆವರಣದ ಹೊರಗೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತಲೆಗೆ ಬಲವಾಗಿ ಮಾರಕಾಸ್ತ್ರದಿಂದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವಗೊಂಡಿರುವ ವಕೀಲ ಕಣ್ಣನ್ [೩೦] ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲಿ ವಕೀಲನ ಮೇಲೆ ಹಲ್ಲೆ ಆಗುತ್ತಿದ್ದರೂ ಯಾರು ಕೂಡ ತಡೆಯುವ ಪ್ರಯತ್ನ ಮಾಡಲಿಲ್ಲ. ಎಲ್ಲರೂ ನೋಡುತ್ತಾ ನಿಂತಿದ್ದರೆ ಕೆಲವರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು.
ಹಲ್ಲೆ ಮಾಡಿದ ವ್ಯಕ್ತಿಯನ್ನು ಕೃಷ್ಣಗಿರಿ ಜಿಲ್ಲೆಯ ಹೊಸೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ವೈಯಕ್ತಿಕ ದ್ವೇಷದಿಂದ ಕೊಲೆಗೆ ಯತ್ನ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮತ್ತೊಂದೆಡೆ ವಕೀಲನ ಸ್ಥಿತಿ ಗಂಭೀರವಾಗಿ ಚಿಕಿತ್ಸೆ ಮುಂದುವರಿಯುತ್ತಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದು, ವಕೀಲರಿಗೆ ಕೋರ್ಟ್ ಆವರಣದಲ್ಲಿಯೇ ಭದ್ರತೆ ಇಲ್ಲದಂತಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.