ಚಲಿಸುತ್ತಿದ್ದ ಬಸ್ ನಿಂದ ತಿನ್ನುತ್ತಿದ್ದ ಪಾನ್ ಉಗಿಯಲು ಹೋದ ವ್ಯಕ್ತಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.
ಪೂರ್ವಾಂಚಲ ಎಕ್ಸ್ ಪ್ರೆಸ್ ವೇನಲ್ಲಿ ಈ ಘಟನೆ ನಡೆದಿದ್ದು, ಹವಾನಿಯಂತ್ರಿತ ಬಸ್ 93 ಕಿ.ಮೀ. ವೇಗದಲ್ಲಿ ಬಸ್ ಚಲಿಸುತ್ತಿದ್ದಾಗ ಬಾಗಿಲು ತೆಗೆದು ಪಾನ್ ಉಗಿಯಲು ಹೋದ 45 ವರ್ಷದ ವ್ಯಕ್ತಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಲಕ್ನೋದಿಂದ ಅಜಮ್ ಗಢಕ್ಕೆ ಸೋಮವಾರ ಬೆಳಿಗ್ಗೆ 10.30ಕ್ಕೆ ಬಸ್ ಹೊರಟ್ಟಿತ್ತು. ಬಾಲ್ದಿಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಹಿ ಗ್ರಾಮದ ಬಳಿ ಬಸ್ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮೃತನ ಜೊತೆ ಆತನ ಪತ್ನಿ ಸಾವಿತ್ರಿ ಕೂಡ ಪ್ರಯಾಣಿಸುತ್ತಿದ್ದರು.
ಘಟನೆ ಬೆನ್ನಲ್ಲೇ ಬಸ್ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮೃತಪಟ್ಟ ವ್ಯಕ್ತಿ ಲಕ್ನೋದ ಚಿಂಚಾಟ್ ಗ್ರಾಮದ ನಿವಾಸಿ ರಾಮ್ ಜೀವನ್ ಎಂದು ಗುರುತಿಸಲಾಗಿದೆ.
ಬಸ್ ಅನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದ್ದು, ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.