ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಒಂದು ವಾರ ಇದ್ದು ಕಣ್ಣೀರು ಹಾಕಿದಿರಲ್ಲಾ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಮಹಿಳೆಯರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾಸನಕ್ಕೆ ಬಂದು ಕಣ್ಣೀರು ಹಾಕಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಜನಕಲ್ಯಾಣ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆ ಎಂದು ಹೇಳಿಕೊಳ್ಳುವ ಹಾಸನದಲ್ಲಿ ಮಹಿಳೆಯರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕರ್ನಾಟಕ ಕಣ್ಣೀರು ಹಾಕಲು ಬಿಡಲ್ಲ ಅಂತ ಹೇಳಿಕೊಳ್ಳುವ ದೇವೇಗೌಡರು ಹಾಸನಕ್ಕೆ ಬಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ ಎಂದರು.
ದೇವೇಗೌಡರು ನನ್ನನ್ನು ಡಿಸಿಎಂ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರನ್ನು ನಾನು ಮತ್ತು ಜಾಲಪ್ಪ ಸೇರಿ ಸಿಎಂ ಮಾಡಿದೆವು. ದೇವೇಗೌಡರು ಕುಟುಂಬದವರನ್ನು ಬಿಟ್ಟು ಯಾರನ್ನು ರಾಜಕೀಯವಾಗಿ ಬೆಳೆಸಿದ್ದಾರೆ? ಬೇರೆಯವರನ್ನು ಬಿಡಿ ಒಕ್ಕಲಿಗರನ್ನೇ ಅವರು ಬೆಳೆಸಲಿಲ್ಲ ಎಂದು ಸಿದ್ದರಾಮಯ್ಯ ಚಾಟಿ ಬೀಸಿದರು.
ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿದ್ದಕ್ಕೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಯಾವ ಕಾರಣಕ್ಕೆ ನನ್ನನ್ನು ಉಚ್ಛಾಟನೆ ಮಾಡಿದರು? ಅವರ ಪಕ್ಷದಿಂದ ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ ಯಾಕೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಅವರು ಹೇಳಿದರು.
ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಆದರೆ ದೇಶ ಬಿಟ್ಟು ಹೋದರಾ? ನಾನು ಅವರಿಗೆ ಹೇಳುವುದು ಏನೆಂದರೆ ನೀವು ದೇಶ ಬಿಟ್ಟು ಹೋಗಬೇಡಿ. ಇಲ್ಲೇ ಇರಿ. ನನಗಿಂತ ದೇವೇಗೌಡರು ೧೫ ವರ್ಷ ದೊಡ್ಡವರು ಆದರೆ ನನ್ನ ವಿರುದ್ಧವೇ ಅವರು ಮಾತನಾಡಿದ ರೀತಿ ನಿರೀಕ್ಷಿಸಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯಗೆ ದುರಂಹಕಾರ ಅಂತ ಹೇಳಿದರು. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುತ್ತೇನೆ ಎಂದು ಹಲ್ಲುಕಚ್ಚಿ ಮಾತನಾಡಿದರು. ಇದನ್ನು ನಾನು ದೇವೇಗೌಡರಿಂದ ನಿರೀಕ್ಷಿಸಿರಲಿಲ್ಲ. ಈಗ ಮತದಾರರೇ ಅವರ ಮೊಮ್ಮಗನನ್ನು ಸೋಲಿಸಿ ಬುದ್ದಿ ಕಲಿಸಿದ್ದಾರೆ ಎಂದು ಅವರು ನುಡಿದರು.
ದೇವೇಗೌಡರು ರಾಜ್ಯಸಭಾ ಸದಸ್ಯರು, ಮಗ ಕೇಂದ್ರದಲ್ಲಿ ಸಚಿವರಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಸ್ತಾಪಿಸುತ್ತಿಲ್ಲ. 4 ಲಕ್ಷ ಕೋಟಿ ತೆರಿಗೆ ಪಾವತಿಸುವ ಕರ್ನಾಟಕಕ್ಕೆ 60 ಸಾವಿರ ವಾಪಸ್ ಬರುತ್ತಿದೆ. ನಬಾರ್ಡ್ ನಿಂದ ಬರಬೇಕಿದ್ದ ನೆರವಿನಲ್ಲಿ ಶೇ.೫೮ರಷ್ಟು ಕಡಿತ ಮಾಡಲಾಗಿದೆ. ಇದನ್ನು ಪ್ರಶ್ನಿಸಬೇಕಿತ್ತಲ್ಲಾ? ಮಹದಾಯಿ ಯೋಜನೆ ಬಗ್ಗೆ ಯಾಕೆ ಸಂಸತ್ ನಲ್ಲಿ ಪ್ರಸ್ತಾಪಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.