೨ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಗೃಹ ಸಚಿವ ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದು, ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಗುರುವಾರ ನಡೆದ ವಿಧಾನಸಭೆ ಕಲಾಪದ ವೇಳೆ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿಪ್ರಹಾರ ಕುರಿತು ಸಚಿವರು ಉತ್ತರ ನೀಡಿದರು.
ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡರು. ಸ್ವತಃ ಸಿಎಂ ಸಿದ್ದರಾಮಯ್ಯ ಹೋರಾಟ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳಿಸಿದಾಗಲೂ ಅವರು ಒಪ್ಪಲಿಲ್ಲ ಎಂದು ಅವರು ಹೇಳಿದರು.
ಹೋರಾಟಗಾರರು ತಾವೇ ಮೊದಲು ಚಪ್ಪಲಿ ಕಲ್ಲು ಎಸೆದರು. ಸ್ವಾಮೀಜಿ ಸೇರಿದಂತೆ ಹಲವರು ಕಾನೂನು ಕೈಗೆತ್ತಿಕೊಂಡರು. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗ ತಡೆಯುವುದು ಅನಿವಾರ್ಯ ಆಗಿತ್ತು. ಒಂದು ಹೋರಾಟಗಾರರು ಹೀಗೆ ಮುತ್ತಿಗೆ ಹಾಕಲು ಅವಕಾಶ ನೀಡಿದರೆ ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ ಎಂದು ಪರಮೇಶ್ವರ್ ನುಡಿದರು.
ಕೋರ್ಟ್ ತಡೆಯಾಜ್ಞೆ ಇದ್ದಾಗಲೂ ನಿರ್ಬಂಧದ ನಿಯಮಗಳನ್ನು ಸ್ವಾಮೀಜಿ ಸೇರಿದಂತೆ ಎಲ್ಲರೂ ಮುರಿದ್ದಾರೆ. ಇದಕ್ಕೆ ಸಂಬಂಧಿಸಿ ನಮ್ಮ ಬಳಿಯೂ ವೀಡಿಯೋ ದಾಖಲೆಗಳು ಫೋಟೋ ಗಳು ಇವೆ. ಸುಮ್ಮ ಸುಮ್ಮನೆ ನಾವು ಲಾಟಿ ಚಾರ್ಜ್ ಮಾಡಿಲ್ಲ ಎಂದು ಪೊಲೀಸರ ವರ್ತನೆಯನ್ನು ಪರಮೇಶ್ವರ್ ಸಮರ್ಥಿಸಿಕೊಂಡರು.