Home ಆರೋಗ್ಯ ಮಾತುಮಾತಿಗೆ ರೇಗುವ ಬೈಯ್ಯುತ್ತಿರಾ? ಹಾಗಾದರೆ ನಿಮ್ಮನ್ನು ಕಾಡುತ್ತಿರುವ ‘ಜಿದ್ದುಗೇಡಿತನ’ ಮಾನಸಿಕ ಸಮಸ್ಯೆ ಬಗ್ಗೆ ತಿಳಿಯಿರಿ

ಮಾತುಮಾತಿಗೆ ರೇಗುವ ಬೈಯ್ಯುತ್ತಿರಾ? ಹಾಗಾದರೆ ನಿಮ್ಮನ್ನು ಕಾಡುತ್ತಿರುವ ‘ಜಿದ್ದುಗೇಡಿತನ’ ಮಾನಸಿಕ ಸಮಸ್ಯೆ ಬಗ್ಗೆ ತಿಳಿಯಿರಿ

ಕೋಪ, ದುಃಖ, ಬೇಸರ, ನಿರಾಸೆಯೇ ಮೊದಲಾದ ಭಾವನೆಗಳನ್ನು ಯಾರಿಗೆ ತಡೆದುಕೊಳ್ಳಲು ಸಾಧ್ಯವೇ ಇರದು ಮತ್ತು ಅದನ್ನು ಅತಿರೇಕದಲ್ಲಿ ಪ್ರದರ್ಶಿಸಲು ಮುಂದಾಗುವರೋ ಅವರಲ್ಲಿ ಈ ಜಿದ್ದುಗೇಡಿನ ಸಮಸ್ಯೆಗಳು ಇರಬಹುದು. 

by Editor
0 comments
Oppositional Defiant Disorder

ಫೇಸ ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಅಥವಾ ಸಮೂಹ ಅಥವಾ ಸಂಘಟನೆಗಳ ಅಥವಾ ವ್ಯವಸ್ಥೆಗಳ ವಿರೋಧವಾಗಿ ಬರೆಯುವವರನ್ನು, ಪ್ರತಿರೋಧ ಒಡ್ಡುವವರನ್ನು, ಪ್ರತಿಭಟನೆ ಮಾಡುವವರನ್ನು, ಟೀಕಿಸುವವರನ್ನು ಗಮನಿಸಿ. ಕೆಲವರು ಧಿಕ್ಕಾರ ಹೇಳುವರು, ಮತ್ತೆ ಕೆಲವರು ಇದನ್ನು ತಾವು ಏಕೆ ಒಪ್ಪುವುದಿಲ್ಲ ಎಂದು ಅಂಶಗಳನ್ನು ಮುಂದಿಟ್ಟುಕೊಂಡು ವಾದಿಸುವರು, ಇನ್ನೂ ಕೆಲವರು ವ್ಯಕ್ತಿಗತವಾಗಿ ಇದನ್ನು ತಾವು ಏಕೆ ಒಪ್ಪುವುದಿಲ್ಲ ಎಂದೋ, ಸಾಮಾಜಿಕವಾಗಿ ಇದು ಹೇಗೆ ಸಮ್ಮತವಲ್ಲ ಎಂದೋ ತಮ್ಮ ಅಭಿಪ್ರಾಯಗಳನ್ನು ಮಂಡಿಸುವರು, ಹುರುಪಿನ ಮತ್ತು ಚುರುಕಿನ ಬರಹಗಾರರು ವ್ಯಂಗ್ಯ ಅಥವಾ ವಿಡಂಬನೆಗಳ ಮೂಲಕ ತಾವು ಒಪ್ಪದ ವಿಷಯಗಳನ್ನು ಖಂಡಿಸುವರು. ಇವೆಲ್ಲವೂ ಕೂಡಾ ವಿರೋಧಿಸುವ ವಿಧಾನಗಳೇ ಆಗಿರುತ್ತವೆ.

ಆದರೆ ಮತ್ತೊಂದು ವಿಧಾನವಿದೆ. ಅದನ್ನು ನೋಡಿದರೆ ಆಘಾತವಾಗುತ್ತದೆ, ಅಸಹ್ಯವಾಗುತ್ತದೆ, ಹೀಗೆಲ್ಲಾ ಬರೆಯಲು ಸಾಧ್ಯವೇ ಎಂದು ತಳಮಳಕ್ಕೊಳಗಾಗುವಂತಾಗುತ್ತದೆ. ಅತ್ಯಂತ ಹೇಯವಾದ ಪರಿಭಾಷೆಗಳಲ್ಲಿ, ಅಸಹ್ಯವಾದ ಮಾತುಗಳಲ್ಲಿ, ಹೇಸಿಗೆ ಹುಟ್ಟಿಸುವಂತೆ ವ್ಯಕ್ತಿಯ ತೇಜೋವಧೆ ಮಾಡುವ, ಚಾರಿತ್ರ್ಯವಧೆ ಮಾಡಲು ಯತ್ನಿಸುವಂತಹ ಟೀಕೆಗಳನ್ನು ನೋಡುತ್ತೇವೆ.  ಅವರು ವ್ಯಕ್ತಿಯ ಅಥವಾ ಸಂಸ್ಥೆಯ ಯಾವುದೋ ಒಂದು ನಡೆ ಅಥವಾ ನುಡಿಯನ್ನು ವಿರೋಧಿಸುವ ಬದಲು ಹೊಲಸು ಮಾತುಗಳಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದು ಕ್ರೂರವೂ ಹೌದು, ಹೊಲಸೂ ಹೌದು. ಇವರೇಕೆ ಹೀಗೆ?

ಇವರ ಮೆದುಳಿನಲ್ಲಿ ಉಂಟಾಗುವ ಯಾವ ರಾಸಾಯನಿಕ ದ್ರವ್ಯಗಳು ಮಸಿಯಾಗಿ ಪದಗಳ ರೂಪದಲ್ಲಿಳಿಯುತ್ತವೆ? ಇವರು ಯಾರು? ಇವರನ್ನು ಜಿದ್ದುಗೇಡಿಗರೆನ್ನಬಹುದು.

ಇವರಿಗಿರುವುದು ಜಿದ್ದುಗೇಡಿನ ಸಮಸ್ಯೆ ಅಥವಾ ODD (Oppositional Defiant Disorder). ಬೇಡ ಎನ್ನಿಸುವುದೋ, ಸರಿ ಇಲ್ಲ ಎನಿಸಿವುದೋ, ತನ್ನಿಂದ ಇದನ್ನು ಒಪ್ಪಲಾಗುವುದಿಲ್ಲ ಎಂದೆನಿಸುವುದೋ; ಒಟ್ಟಿನಲ್ಲಿ ಯಾವಾಗಲಾದರೂ ಪ್ರತಿಭಟಿಸುವುದು, ವಿರೋಧಿಸುವುದೇನೋ ಸರಿ. ಆದರೆ, ಕೆಲವರನ್ನು ನೀವು ಗಮನಿಸಿರಬಹುದು. ಎಲ್ಲದಕ್ಕೂ ವಿರೋಧಿಸುತ್ತಿರುತ್ತಾರೆ. ಪ್ರತಿಭಟಿಸುತ್ತಿರುತ್ತಾರೆ. ಒಲ್ಲೆ ಎನ್ನುತ್ತಾರೆ. ಅಥವಾ ಅವರು ಬೇಕು ಎಂದರೆ ಬೇಡ ಎನ್ನುತ್ತಾರೆ, ಬೇಡ ಎಂದರೆ ಬೇಕು ಎನ್ನುತ್ತಾರೆ. ಒಟ್ಟಿನಲ್ಲಿ ಯಾವಾಗಲೂ ಉಲ್ಟಾನೇ. ಆ ವಿರೋಧವೂ ಕೂಡಾ ಸಕಾರಣವಾಗಿರುವುದಿಲ್ಲ. ತಾನು ಒಪ್ಪುವುದಿಲ್ಲ ಎನ್ನುವ ಹಟಮಾರಿತನ ಮಾತ್ರವೇ ಆಗಿರುತ್ತದೆ. ಎದುರಿಂದಲೇನಾದರೂ ಪ್ರತಿರೋಧ ಬಂದರೆ ಜಗಳಕ್ಕೇ ನಿಂತುಬಿಡುತ್ತಾರೆ. ರಣಘೋರ ಸಂಗ್ರಾಮದಲ್ಲಿ ನಿರತರಾಗುತ್ತಾರೆ. ಇದು ಕುಟುಂಬಗಳಲ್ಲಿ ಮಾತ್ರವಲ್ಲ, ಶಾಲೆಯಲ್ಲಿ, ಕಾಲೇಜುಗಳಲ್ಲಿ, ಕೆಲಸದ ಜಾಗಗಳಲ್ಲಿ, ಟಿವಿ ಡಿಬೇಟುಗಳಲ್ಲಿ, ರಾಜಕೀಯ ಚರ್ಚೆಗಳಲ್ಲಿ, ಸೈದ್ಧಾಂತಿಕ ಸಂವಾದಗಳಲ್ಲಿ, ವಿಚಾರಗೋಷ್ಟಿಗಳಲ್ಲಿ; ಎಲ್ಲಿ ಬೇಕಾದರೂ ಕಾಣಬಹುದು. ಅವರ ಪ್ರಧಾನವಾದ ಗುಣವೇ ಜಿದ್ದಿಗೆ ಬಿದ್ದವರಂತೆ ಇತರರನ್ನು ಮಣಿಸಲು ಯತ್ನಿಸುವುದು. ತಪ್ಪು ಸರಿ, ಅಗತ್ಯ ಅನಗತ್ಯ, ಉಚಿತ ಅನುಚಿತ; ಏನೂ ಲೆಕ್ಕಕ್ಕಿರುವುದಿಲ್ಲ.

banner

ವಿಚಾರಗಳು, ವಿಷಯಗಳು, ಸಿದ್ಧಾಂತಗಳು, ಸಂಗತಿಗಳಲ್ಲ ಅವರಿಗೆ ಮುಖ್ಯ. ಅವರ ರಣೋತ್ಸಾಹವಷ್ಟೇ ಮುಖ್ಯ. ಇಂಥಾ ರಣಕೇಕೆಗೆ ಬಹುಶಃ ಈ ಜಿದ್ದುಗೇಡಿನ ಸಮಸ್ಯೆ ಅಥವಾ ಆಪೋಸಿಷನಲ್ ಡಿಫಾಯಿಂಟ್ ಡಿಸಾರ್ಡರ್ ಅಥವಾ ಓ ಡಿ ಡಿ ಇರಬಹುದು.

ಮಕ್ಕಳಾಗಿರುವಾಗಲೇ ಇದನ್ನು ಗುರುತಿಸಬಹುದು. ಅದರಲ್ಲೂ ಹದಿಹರೆಯದ ಹೊಸ್ತಿಲಲ್ಲಿ ಇರುವಾಗ ಯಾವ ಮಕ್ಕಳು ಮನೆಯ ಹಿರಿಯರ ಮತ್ತು ಶಾಲೆಯಲ್ಲಿ ವ್ಯವಸ್ಥೆಯ ಅಥವಾ ಶಿಕ್ಷಕರ ಅಧಿಕಾರವನ್ನು ಪದೇ ಪದೇ ಧಿಕ್ಕರಿಸುತ್ತಾ, ಸರಿಯಾದ ಕಾರಣವೇ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ಅಥವಾ ಶಾಲೆಯಲ್ಲಿ ಒಂದು ಸಾಮಾನ್ಯ ನಿಯಮಗಳು ಇರುತ್ತವೆ. ಆ ನಿಯಮಗಳು ಸ್ವೇಚ್ಛೆಯನ್ನು ಅಥವಾ ಅತಿ ಸ್ವಾತಂತ್ರ್ಯವನ್ನು ಹತೋಟಿಯಲ್ಲಿಡಲು ಅಗತ್ಯವಾಗಿರುವಂತಹ ನಿರ್ಬಂಧಗಳಾಗಿರುತ್ತವೆ. ವ್ಯಕ್ತಿಯನ್ನು ಹತ್ತಿಕ್ಕುವಂತಿರುವುದಿಲ್ಲ. ಆದರೆ ವ್ಯವಸ್ಥೆಯೊಂದನ್ನು ಯಶಸ್ವಿಯಾಗಿ ಅದರ ಸಾಮಾನ್ಯ ಗುರಿ ಮುಟ್ಟಲು ಬೇಕಾದಂತಹ ಕ್ರಮವನ್ನು ರೂಢಿಸುವ ಉದ್ದೇಶವನ್ನು ಹೊಂದಿರುತ್ತದೆ. ಅಂತಹುದನ್ನೂ ವಿರೋಧಿಸುವಂತಹ ಮನಸ್ಸು ಮತ್ತು ಅದನ್ನು ಮೀರಿಯೇ ನಡೆಯ ಬೇಕೆನ್ನುವ ಆಗ್ರಹವನ್ನು ಜಿದ್ದುಗೇಡಿಗರು ತೋರುತ್ತಾರೆ.

ಯಾವ ವ್ಯಕ್ತಿ ಅಥವಾ ಮಗು ಸರಿ ಸುಮಾರು ಆರು ತಿಂಗಳಾದರೂ ಎಲ್ಲದಕ್ಕೂ ಪ್ರತಿರೋಧ ಒಡ್ಡುವುದು, ಪ್ರತಿಭಟಿಸುವುದು, ವಿರೋಧವಾಗಿಯೇ ನಡೆದುಕೊಳ್ಳುವುದು ಮಾಡುತ್ತಿದ್ದರೆ ಆ ವ್ಯಕ್ತಿಗೆ ಓ ಡಿ ಡಿ ಇದೆ ಎಂದು ಊಹಿಸಬಹುದು.

ಸದಾ ಕಾಲ ವಾದಿಸುತ್ತಲೇ ಇರುವುದು, ಅವಿಧೇಯವಾಗಿಯೇ ನಡೆದುಕೊಳ್ಳುವುದು, ಹಿಂದಿರುಗಿಸಿ ಮಾತಾಡುತ್ತಿರುವುದು, ಬೇಡ ಎನ್ನುವುದನ್ನು ಬೇಕೆಂದೇ ಮಾಡುವುದು, ಮಾಡು ಎನ್ನುವುದನ್ನು ಬೇಕಾಗಿಯೇ ಮಾಡದಿರುವುದು; ಇವೆಲ್ಲವೂ ಜಿದ್ದುಗೇಡಿನ ಸಮಸ್ಯೆಯೇ ಆಗಿರುತ್ತದೆ.

ಸಾಮಾನ್ಯವಾಗಿ ಎಂಟನೆಯ ವಯಸ್ಸಿಗೇ ಈ ಸಮಸ್ಯೆಯ ಲಕ್ಷಣಗಳು ಕಾಣಬರುತ್ತವೆ. ಹನ್ನೆರಡು ಹದಿಮೂರು ವಯಸ್ಸಿಗೆ ಬರುವಷ್ಟರಲ್ಲಿ ಢಾಳಾಗಿ ವಿಜೃಂಭಿಸುತ್ತಿರುತ್ತವೆ. ಮಕ್ಕಳಲ್ಲಿರುವಾಗ ಅದೇಕೋ ಈ ಸಮಸ್ಯೆ ಗಂಡು ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಹೆಣ್ಣು ಮಕ್ಕಳಲ್ಲೂ ಇರುತ್ತದೆ. ಆದರೆ ಅನುಪಾತದ ದೃಷ್ಟಿಯಲ್ಲಿ ಗಂಡು ಹೆಚ್ಚು. ಆದರೆ ವಯಸ್ಕರಲ್ಲಿ ಗಮನಿಸಿದರೆ ಹಾಗೇನೂ ಇಲ್ಲ. ಲಿಂಗಾತೀತವಾಗಿ ಈ ಸಮಸ್ಯೆಯನ್ನು ಹಂಚಿಕೊಳ್ಳುತ್ತಾರೆ.

ಜಿದ್ದುಗೇಡಿನ ಸಮಸ್ಯೆ ಇರುವಂತಹ ಮಕ್ಕಳಿಗಾಗಲಿ ಅಥವಾ ದೊಡ್ಡವರಿಗಾಗಲಿ ಅನೇಕ ವರ್ತನೆಯ ಸಮಸ್ಯೆಗಳೂ ಜೊತೆಗಿರುತ್ತವೆ. ಇದು ನಡವಳಿಕೆಯ ದೋಷದ ತುತ್ತತುದಿಯನ್ನೂ ತಲುಪಬಹುದು.

ಜಿದ್ದುಗೇಡಿಗಳ ಸಾಮಾನ್ಯ ಲಕ್ಷಣಗಳು:

1. ಸಣ್ಣಪುಟ್ಟ ವಿಷಯಕ್ಕೂ ಕೋಪದಿಂದ ಪ್ರತಿಕ್ರಿಯಿಸುವುದು.

2. ಅಧಿಕಾರ ಅಥವಾ ಹಕ್ಕುದಾರಿಕೆಯುಳ್ಳ ಹಿರಿಯರೊಂದಿಗೆ, ಅಧಿಕಾರಿಗಳೊಂದಿಗೆ ಆವೇಶಭರಿತವಾಗಿ ವಾದಿಸುವುದು.

3. ಕೋರಿಕೆಯನ್ನಾಗಲಿ, ನಿಯಮವನ್ನಾಗಲಿ ಮೆಲ್ಲನೆ ಹೇಳಿದರೂ, ಗದರಿಸಿ ಹೇಳಿದರೂ ಮಾತು ಕೇಳದಿರುವುದು. ಅವರಿಗೆ ಕೋರಿಕೊಂಡರೂ ಇಲ್ಲ, ಅಧಿಕಾರಯುತವಾಗಿ ಹೇಳಿದರೂ ಕೇಳುವುದಿಲ್ಲ.

4. ವಿನಾಕಾರಣ ಮತ್ತು ಬಹು ಬೇಗನೆ ಬೇಸರಕ್ಕೆ ಒಳಗಾಗುವುದು. ಅದೇ ರೀತಿ ಇತರರನ್ನು ಬೇಸರಗೊಳಿಸುವುದು.

5. ತಮ್ಮ ತಪ್ಪುಗಳಿಗೂ ಬೇರೆಯವನ್ನೇ ದೂರುವುದು ಅಥವಾ ದೂಷಿಸುವುದು.

6. ಆಗ್ಗಿಂದಾಗ್ಗೆ ಕೋಪದಿಂದ ಸ್ಫೋಟಗೊಂಡು ಮುಖ ಮೂತಿ ನೋಡದೇ ಇತರರ ಮೇಲೆ ಹರಿಹಾಯುವುದು.

7. ತಮಗೆ ಯಾರಾದರೂ ಏನಾದರೂ ಅಂದರೆ, ಅಥವಾ ವಿರೋಧವಾಗಿ ವರ್ತಿಸಿದರೆ ಅವರ ಮೇಲೆ ಸೇಡಿನ ಮನೋಭಾವವನ್ನು ಹೊಂದುವುದು ಮಾತ್ರವಲ್ಲದೇ, ಜಿದ್ದಿಗೆ ಬಿದ್ದವರಂತೆ ಅವರನ್ನು ಮಣಿಸಲು ಯತ್ನಿಸುವುದು.

8. ವಿರೋಧಿಸುವಾಗ ಅಥವಾ ಪ್ರತಿರೋಧವನ್ನು ವ್ಯಕ್ತಪಡಿಸುವಾಗ ಕೆಟ್ಟಾ ಕೊಳಕು ಮಾತುಗಳಲ್ಲಿ ನಿಂದಿಸುವುದು. ಚಾರಿತ್ರ್ಯವಧೆ ಮಾಡುವಂತೆ, ತೇಜೋವಧೆಯಾಗುವಂತೆ ಮಾಡುವುದರಲ್ಲಿ ಆಸಕ್ತಿಯನ್ನು ತೋರುವುದು. ತಮಗೆ ಹಿಡಿಸದವರ ಬಗ್ಗೆ ನಿರ್ಲಜ್ಜೆಯಿಂದ ಅಸಹ್ಯ ಶಬ್ದಗಳಲ್ಲಿ ಅವಹೇಳನ ಮಾಡುವುದು.

9. ತಮಗೆ ಬೇಸರವಾದಾಗ, ಕೋಪ ಬಂದಾಗ, ಅಸಮ್ಮತಿ ಇರುವಾಗ ಅನಗತ್ಯವಾದ ಪದಗಳಲ್ಲಿ ತಮ್ಮ ಅಸಹನೆಯನ್ನು ಬಿಡದಂತೆ ತೋಡಿಕೊಳ್ಳುತ್ತಲೇ ಇರುವುದು.

10. ಅನಗತ್ಯವಾಗಿ ಭಾವೋದ್ವೇಗಕ್ಕೆ ಒಳಗಾಗುವುದು, ಸುಲಭವಾಗಿ ಕಿರಿಕಿರಿ ಮಾಡಿಕೊಳ್ಳುವುದು ಮತ್ತು ಆತ್ಮಸ್ಥೈರ್ಯವನ್ನು ಮತ್ತು ಸ್ವನಿಯಂತ್ರಣವನ್ನು ಬಹು ಬೇಗನೆ ಕಳೆದುಕೊಳ್ಳುವುದು.

ಈ ಬಗೆಯ ವ್ಯಕ್ತಿಗಳನ್ನು ಕಂಡಾಗ “ಇವರು ಯಾಕೆ ಹೀಗೆ?” ಎಂದು ಪ್ರಶ್ನಿಸಿಕೊಳ್ಳುತ್ತಿರುತ್ತೇವೆ. ಅವರ ಬಗ್ಗೆ ಹೇಸಿಗೆ ಮತ್ತು ಆಘಾತಗಳನ್ನು ವ್ಯಕ್ತಪಡಿಸುತ್ತಿರುತ್ತೇವೆ. ಆದರೆ ಮನೋವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಿದರೆ, ನಮಗೆ ಅವರೊಂದಿಗೆ ವ್ಯವಹರಿಸಲು ಒಂದು ಹಂತಕ್ಕೆ ಸಾಧ್ಯವಾಗಬಹುದು, ಹಾಗೆಯೇ ಒಂದು ವೇಳೆ ನಾವೇ ಜಿದ್ದುಗೇಡಿನ ವ್ಯಕ್ತಿಯಾಗಿದ್ದರೆ ಅದನ್ನು ಪರಿಹರಿಸಿಕೊಳ್ಳುವ ದಿಕ್ಕಿನಲ್ಲಿ ಕೆಲಸ ಮಾಡಬಹುದು.

ಜಿದ್ದುಗೇಡಿನ ಕಾರಣ ಮತ್ತು ಸಾಧ್ಯತೆಗಳು:

ನಿಜ ಹೇಳಬೇಕೆಂದರೆ ಜಿದ್ದುಗೇಡಿನ ಹುಟ್ಟಿನ ಕಾರಣವನ್ನು ನಿರ್ದಿಷ್ಟವಾಗಿ ಇದೇ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಜೈವಿಕ ಕಾರಣಗಳಿರಬಹುದು ಅಥವಾ ಅನುವಂಶೀಯವಾಗಿಯೂ ಬಂದಿರಬಹುದು. ಆದರೆ ಸಣ್ಣ ಪುಟ್ಟ ಸ್ವರೂಪದಲ್ಲಿ ಇದ್ದಿರುವಂತಹ ಈ ಸಮಸ್ಯೆಯನ್ನು ಪರಿಸರ ಚೆನ್ನಾಗಿ ಬೆಳೆಸಬಹುದು. ಕೆಲವೊಮ್ಮೆ ಪರಿಸರದಿಂದಲೂ ಹುಟ್ಟಬಹುದು. ಮಗು ಅಥವಾ ವ್ಯಕ್ತಿಯು ಇರುವಂತಹ ಪರಿಸರವು ಅಂತಹ ಜಿದ್ದಿನ, ದ್ವೇಷದ, ಅಸಹನೆಯ ವಾತಾವರಣವನ್ನು ಹೊಂದಿದ್ದರೆ, ಈ ಸಮಸ್ಯೆಯು ಗಟ್ಟಿಯಾಗಿ ಬೆಳೆಯುತ್ತಾ ಹೋಗುವುದು.

ಮೆದುಳಿನಲ್ಲಿ ಸ್ರವಿಸುವ ರಾಸಾಯನಿಕ ದ್ರವ್ಯಗಳಿಂದ, ನರಗಳಿಂದ (ನ್ಯೂರೋ ಟ್ರಾನ್ಸ್ಮಿಟರ್) ಕೆಲವೊಮ್ಮೆ ಕೆಲಸಗಳು ಸರಿಯಾಗಿ ಆಗವು. ಮೆದುಳಿನಲ್ಲಿ ನರಕೋಶಗಳು ಪರಸ್ಪರ ಸಂವಹನ ನಡೆಸಲು ನ್ಯೂರೋಟ್ರಾನ್ಸ್ಮಿಟರ್ ಸಹಾಯ ಮಾಡುತ್ತದೆ. ಒಂದು ವೇಳೆ ಇಲ್ಲಿ ರಾಸಾಯನಿಕ ಕ್ರಿಯೆಯು ಸರಿಯಾಗಿ ನಡೆಯದೇ ಇದ್ದ ಪಕ್ಷದಲ್ಲಿ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳನ್ನು ನೀಡುವಂತಹ ನರಕೋಶಗಳು ಕೂಡಾ ಸರಿಯಾಗಿ ಕೆಲಸ ಮಾಡುವುದಿಲ್ಲ. ಆಗೆಲ್ಲಾ ಇಂಥಾ ಜಿದ್ದುಗೇಡಿತನ, ತಿಳಿಗೇಡಿತನದಂತಹ ಸಮಸ್ಯೆ ಮತ್ತು ವಿನಾಚುರುಕಿನ ಸಮಸ್ಯೆ (ಎ ಡಿ ಹೆಚ್ ಡಿ / ಅಟೆಂಶನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್) ರೀತಿಯ ಅನೇಕ ಸಮಸ್ಯೆಗಳು ತಲೆದೋರುವವು. ಅಷ್ಟೇ ಅಲ್ಲ, ಕಲಿಕೆಯಲ್ಲಿ ತೊಡಕು, ಖಿನ್ನತೆ, ಆತಂಕದ ಸಮಸ್ಯೆಗಳೂ ಕೂಡಾ ಈ ಸಮಸ್ಯಾತ್ಮಕ ವರ್ತನೆಗಳ ಭಾಗವಾಗಿರಬಹುದು.

ಮೆದುಳಿನಲ್ಲಿ ಇರುವ ಕೆಲವು ಬಗೆಯ ನ್ಯೂನತೆಗಳಿಂದಲೂ ಅಥವಾ ಏಟಾಗುವುದರಿಂದಲೂ ಮಕ್ಕಳಲ್ಲಿ ಅಥವಾ ದೊಡ್ಡವರಲ್ಲಿ ವರ್ತನೆಯ ದೋಷಗಳನ್ನು ಕಾಣಬಹುದು. ಕೋಪ, ದುಃಖ, ಬೇಸರ, ನಿರಾಸೆಯೇ ಮೊದಲಾದ ಭಾವನೆಗಳನ್ನು ಯಾರಿಗೆ ತಡೆದುಕೊಳ್ಳಲು ಸಾಧ್ಯವೇ ಇರದು ಮತ್ತು ಅದನ್ನು ಅತಿರೇಕದಲ್ಲಿ ಪ್ರದರ್ಶಿಸಲು ಮುಂದಾಗುವರೋ ಅವರಲ್ಲಿ ಈ ಜಿದ್ದುಗೇಡಿನ ಸಮಸ್ಯೆಗಳು ಇರಬಹುದು.

ಅವರ ಕುಟುಂಬದ ಚರಿತ್ರೆಯಲ್ಲಿ ಮಕ್ಕಳ ಹತ್ತಿರದ ಸಂಬಂಧಿಗಳಿಗೆ ಖಿನ್ನತೆ, ಆತಂಕ ಮತ್ತು ವ್ಯಕ್ತಿತ್ವ ದೋಷವೇ ಮುಂತಾದ ಮಾನಸಿಕ ಸಮಸ್ಯೆಗಳು ಇದ್ದಲ್ಲಿಯೂ ಕೂಡಾ ಈ ಜಿದ್ದುಗೇಡಿತನದ ಸಾಧ್ಯತೆಗಳು ಇರಬಹುದು. ಹೌದು, ಕೆಲವೊಂದು ಸಂದರ್ಭಗಳಲ್ಲಿ ಅನುವಂಶೀಯವಾಗಿಯೂ ಕೂಡಾ ಈ ಸಮಸ್ಯೆಯು ವ್ಯಕ್ತಿಗಳಿಗೆ ಆತುಕೊಂಡಿರುತ್ತದೆ.

ಇನ್ನೂ ಕೆಲವು ಸಲ ಕೌಟುಂಬಿಕ ವಾತಾವರಣವೂ ಕೂಡಾ ಈ ಸಮಸ್ಯೆಯನ್ನು ಹೊಂದುವ ಸಾಧ್ಯತೆಗಳಿರುತ್ತವೆ. ಒಡಕಿನ ಕುಟುಂಬ, ಪದೇ ಪದೇ ಆಗುತ್ತಿರುವ ಕೌಟುಂಬಿಕ ಕಲಹಗಳು, ಆರೋಗ್ಯಕರ ಕ್ರಮವಿಲ್ಲದ, ಮಾನಸಿಕ ಒತ್ತಡಗಳು, ಸಂಘರ್ಷಗಳು ಇರುವಂತಹ ಮನೆಯ ಮಕ್ಕಳಿಗೂ ಕೂಡಾ ಜಿದ್ದುಗೇಡಿತನವು ಅಂಟಿಕೊಳ್ಳಬಹುದು. ಲ್ಯಾಬ್ ಟೆಸ್ಟ್ ಅಂತ ಏನೂ ಇಲ್ಲದಿರುವ ಕಾರಣದಿಂದ ದೀರ್ಘ ಕಾಲದ ವರ್ತನೆಗಳನ್ನು ಗಮನಿಸಿಕೊಂಡೇ ಜಿದ್ದುಗೇಡಿತನವು ಇರುವುದರ ಸಾಧ್ಯತೆಯನ್ನು ಕಂಡುಕೊಳ್ಳಬೇಕಾಗುತ್ತದೆ.

ಚಿಕಿತ್ಸಾಕ್ರಮಗಳು:

ಈ ಜಿದ್ದುಗೇಡಿತನವು ಎಷ್ಟರ ಮಟ್ಟಿಗೆ ತೀವ್ರವಾಗಿದೆ ಹಾಗೂ ಯಾವ ವಯಸ್ಸಿನವರು ಅನ್ನುವುದರ ಮೇಲೆ ಚಿಕಿತ್ಸಾಕ್ರಮವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆಲೋಚನಾ ಕ್ರಮವನ್ನು ರೂಪಿಸುವಂತಹ, ತಿದ್ದುವಂತಹ ಸಮಾಲೋಚನೆಗಳ ಆಧಾರದಲ್ಲಿ ಸೈಕೋಥೆರಪಿ ನೀಡಬಹುದಾಗಿರುತ್ತದೆ. ನಡವಳಿಕೆಗಳು ಉತ್ತಮಗೊಳ್ಳಲು ಉದ್ದೇಶಿತ ವರ್ತನಾ ಚಿಕಿತ್ಸೆ ಅಥವಾ ಅರಿವಳಿಕೆ (ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ) ಒಂದು ಹಂತಕ್ಕೆ ಸಹಾಯಕವಾಗುತ್ತದೆ. ಮಗುವಿನ ಅಥವಾ ವ್ಯಕ್ತಿಯೊಬ್ಬನ ಆಲೋಚನಾ ಕ್ರಮವನ್ನು ತಿದ್ದುವ ಮೂಲಕ ಆತನ ವರ್ತನೆಗಳನ್ನು ಅಪೇಕ್ಷಿತ ಮತ್ತು ಸಹನೀಯ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ.

ಯಾವುದೇ ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಕುಟುಂಬವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಂತೆಯೇ ಜಿದ್ದುಗೇಡಿತನದಲ್ಲಿಯೂ ಕೂಡಾ ಕುಟುಂಬದ ಸದಸ್ಯರು ಕೂಡಾ ಸಮಸ್ಯೆ ಇರುವವರ ಜೊತೆಗೆ ತಮ್ಮ ವರ್ತನೆ, ಪ್ರತಿವರ್ತನೆ, ಪ್ರತಿಕ್ರಿಯೆಯೇ ಮೊದಲಾದವುಗಳ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚಿಕಿತ್ಸಾ ಕ್ರಮದ ಭಾಗವಾಗಬಹುದು. ಮಕ್ಕಳ ವಿಷಯದಲ್ಲಾದರೆ ತಂದೆ ತಾಯಿ ಮತ್ತು ಕುಟುಂಬದ ಸದಸ್ಯರಿಗೆ ಪೋಷಕ ತರಬೇತಿ (ಪೇರೆಂಟ್ ಮೇನೇಜ್ಮೆಂಟ್ ಟ್ರೈನಿಂಗ್) ಕೊಡಬೇಕಾಗುತ್ತದೆ. ಏಕೆಂದರೆ ಮಕ್ಕಳು ನಕಾರಾತ್ಮಕವಾಗಿ ವರ್ತಿಸಿದಾಗ ಸಕಾರಣದಿಂದಲೂ ಮತ್ತು ಯುಕ್ತವಾಗಿ ನಡೆದುಕೊಳ್ಳಬೇಕಾದ ಕೌಶಲ್ಯವನ್ನು ಪೋಷಕರು ಕಲಿಯಬೇಕು. ಬಹಳಷ್ಟು ಪೋಷಕರಿಗೆ ಇರುವ ಸಮಸ್ಯೆಯೇ ಇದು.

ಮಗುವು ಅನಪೇಕ್ಷಿತವಾಗಿ ವರ್ತಿಸಿತು ಎಂದರೆ ಅವರು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಅನಪೇಕ್ಷಿತ ವರ್ತನೆಯನ್ನು ತೋರಿ ಅಬ್ಬರಿಸುವರು. ಇದರಿಂದ ಮಗುವಿನ ಮೇಲೆ ನಕಾರಾತ್ಮಕವಾದ ಗಂಭೀರ ಪರಿಣಾಮಗಳಾಗುತ್ತವೆಯೇ ಹೊರತು ಇನ್ನು ಯಾವ ಒಳಿತೂ ಆಗುವುದಿಲ್ಲ. ಮನೆಯಲ್ಲಿ ಸಕಾರಾತ್ಮಕವಾದ ನಡವಳಿಕೆಗಳು ಮತ್ತು ನಕಾರಾತ್ಮಕವಾದ ನಡವಳಿಕೆಗಳ ಬಗ್ಗೆ ಒಂದು ಸ್ಪಷ್ಟವಾದ ಒಪ್ಪಂದವು ಇರಬೇಕು. ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು. ಅದು ಪೋಷಕರ ಅಧಿಕಾರವನ್ನು ಪ್ರದರ್ಶಿಸುವಂತಿರದೇ ನ್ಯಾಯಬದ್ಧವಾಗಿ ಸಹಜತೆಯನ್ನು ಹೊಂದಿರಬೇಕು. ಕುಟುಂಬದ ಸದಸ್ಯರು “ನಾನು ಹೀಗೆ ವರ್ತಿಸಬೇಕು” ಎಂದು ನಿರ್ಧಾರ ಮಾಡಿಕೊಂಡು ಅದಕ್ಕೆ ಬದ್ಧವಾಗಿರುವ ಕ್ರಮವಂತೂ ಬಹಳ ಪರಿಣಾಮಕಾರಿಯಾಗಿರುತ್ತದೆ.

ಕೆಲವು ಸಂದರ್ಭಗಳಲ್ಲಿ ಜಿದ್ದುಗೇಡಿನ ಮಕ್ಕಳಲ್ಲಿ ಹಠಾತ್ ಪ್ರವೃತ್ತಿ (ಇಂಪಲ್ಸಿವ್ ಡಿಸಾರ್ಡರ್), ಗೀಳಿನ ರೋಗವು (ಒಬ್ಸೆಸಿವ್ ಕಂಪಲ್ಸರಿ ಡಿಸಾರ್ಡರ್ / ಓ ಸಿ ಡಿ) ಮತ್ತು ವಿನಾಚುರುಕಿನ ಸಮಸ್ಯೆ (ಅಟೆಂಶನ್ ಡಿಫಿಸಿಟ್ ಹೈಪರ್ಯಾಕ್ಟಿವಿಟಿ ಡಿಸಾರ್ಡರ್) ಕೂಡಾ ಇದ್ದ ಪಕ್ಷದಲ್ಲಿ ಔಷಧೋಪಚಾರವೂ ಬೇಕಾಗಬಹುದು. ಅದನ್ನು ತಜ್ಞ ಮನೋವೈದ್ಯರೇ ಸಲಹೆ ನೀಡಬೇಕು.

ಉದ್ದೇಶಿತ ವರ್ತನಾ ಚಿಕಿತ್ಸೆ ಅಥವಾ ಅರಿವಳಿಕೆ (ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ) ರೀತಿಯಲ್ಲಿ ಸಾಮಾನ್ಯೀಕರಿಸಿ ಹೇಳಲು ಸಾಧ್ಯವಾಗುವುದಿಲ್ಲ.

ನಾವು ಗುರುತಿಸುವಂತೆ ಜಿದ್ದುಗೇಡಿ ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಕಂಡು ಬಂದರೆ ಅಥವಾ ಮನೆಯಲ್ಲಿದ್ದರೆ ಕೆಲವು ರೂಢಿಯನ್ನು ಮಾಡಿಕೊಳ್ಳುವುದು ಅವಶ್ಯಕ.

1. ಅವರ ಕೆಲವು ಸಕಾರಾತ್ಮಕವಾದ ಗುಣಗಳನ್ನು ಮತ್ತು ಸೂಕ್ತವಾದ ನಡವಳಿಕೆಯನ್ನು ಪ್ರಶಂಸಿಸುವುದು. ಈ ಪ್ರಶಂಸೆ ಅವರಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ.

2. ಸಣ್ಣ ಮಕ್ಕಳಾದರೆ ಅವರ ಒಳ್ಳೆಯ ಕೆಲಸವನ್ನು ಇತರರ ಮುಂದೆ ಪ್ರಶಂಸೆ ಮಾಡಿ, ಅದರ ಕುರುಹಾಗಿ ಏನಾದರೂ ಸಣ್ಣಪುಟ್ಟ ಉಡುಗೊರೆಗಳನ್ನೂ ಕೊಡಿ.

3. ಬಹಳ ಮುಖ್ಯವಾಗಿ ಅವರಲ್ಲಿ ನೀವು ಏನನ್ನು ನೋಡ ಬಯಸುತ್ತೀರೋ ಅದನ್ನು ನಿಮ್ಮ ನಡವಳಿಕೆಯಲ್ಲಿ ತೋರಿಸಿ. ನೀವೇ ಅವರಿಗೆ ಮಾದರಿಯಾಗಿ ನಿಲ್ಲಿ.

4. ಇದು ನನ್ನ ಹಕ್ಕು, ಇದು ನನ್ನ ಅಧಿಕಾರ, ನೀನು ನಾನು ಹೇಳಿದಂತೆ ಕೇಳಬೇಕು. ನೀನು ನನ್ನ ಅಧೀನದಲ್ಲಿ ಇರುವುದು; ಈ ಬಗೆಯ ಬಲಾಬಲಗಳ ಘರ್ಷಣೆ ಆಗದಂತೆ ನೋಡಿಕೊಳ್ಳಿ. ನಿಮ್ಮ ಅಹಂಕಾರ ಪ್ರದರ್ಶನಗೊಂಡಷ್ಟೂ ಅವರ ಉದ್ಧಟತನ ಮತ್ತು ಹಟಮಾರಿತನ ಹೆಚ್ಚುತ್ತಲೇ ಹೋಗುತ್ತದೆ. ನಮ್ಮ ನಿರಹಂಕಾರದ ನಡವಳಿಕೆ ಬಹಳ ಮುಖ್ಯ.

5. ಜಿದ್ದುಗೇಡಿನ ಮಕ್ಕಳ ಮತ್ತು ವ್ಯಕ್ತಿಗಳ ಸಮ್ಮುಖದಲ್ಲಿ ನಮ್ಮ ನಮ್ಮ ಕರ್ತವ್ಯಗಳನ್ನು ಮಾಡುವುದು, ಮನೆಯ ಕೆಲಸಗಳಲ್ಲಿ ಅಥವಾ ಹೊರಗೆ ವಯಸ್ಸು, ಅಧಿಕಾರ ಮತ್ತು ಸ್ಥಾನಮಾನಗಳ ಅಹಮಿಕೆಯಿಲ್ಲದೇ ಭಾಗವಹಿಸುವುದು. ಹಾಗೂ ಅವರನ್ನು ಸಹಾಯಕ್ಕೆ ಕರೆಯುವುದು.

6. ಪ್ರತಿಯೊಬ್ಬರ ಇತಿ ಮಿತಿಗಳನ್ನು ಅಥವಾ ಎಲ್ಲೆಗಳನ್ನು ಸ್ಪಷ್ಟಗೊಳಿಸಿರಬೇಕು. ಅದಕ್ಕೆ ಬದ್ಧರಾಗಿಯೂ ಇರಬೇಕು. ಜಿದ್ದುಗೇಡಿನ ಮಕ್ಕಳು ಅಥವಾ ವಯಸ್ಕರು ಅದನ್ನು ಮೀರಿದಾಗ ಸ್ಪಷ್ಟವಾಗಿ ಅದನ್ನು ಗುರುತಿಸಬೇಕು. ಆದರೆ ಗುರುತಿಸುವಿಕೆಯಲ್ಲಿ ಆಕ್ರಮಣಕಾರಿಯಾಗಿ ಅಥವಾ ನಿಂದನಾಕಾರಿಯಾಗಿ ವರ್ತಿಸಬಾರದು. ಇದು ಸ್ಪಷ್ಟ.

7. ಯಾವ ಕ್ರಮವನ್ನು ಮತ್ತು ನಿಯಮಗಳನ್ನು ಹೊಂದಿರುತ್ತೇವೆಯೋ ಅದಕ್ಕೆ ಕರಾರುವಕ್ಕಾಗಿ ಬದ್ಧವಾಗಿರಲೇ ಬೇಕು.

8. ಅವರೂ ಮತ್ತು ನೀವು ಇಬ್ಬರೂ ಒಟ್ಟಾಗಿ ಸಂತೋಷಪಡುವ ಚಟುವಟಿಕೆಗಳನ್ನು ಮಾಡುವುದು ಅಥವಾ ಸಮಯವನ್ನು ಕಳೆಯುವುದು.

ಮನೆಯಲ್ಲಿ ಯಾರಿಗೇ ಜಿದ್ದುಗೇಡಿತನವಿದ್ದರೂ ಉಳಿದವರೆಲ್ಲಾ ಪರಸ್ಪರ ಸಹಕಾರ ಮನೋಭಾವದಿಂದ ವರ್ತಿಸಬೇಕು. ಆಗ ಕುಟುಂಬವು ರಚನಾತ್ಮಕವಾಗಿರುತ್ತದೆ. ಜಿದ್ದುಗೇಡಿನ ಮಗುವನ್ನು ಮನೆಗೆಲಸದಲ್ಲಿ ತೊಡಗುವಂತೆ ನೋಡಿ. ಹಾಗೂ ಮಗುವು ಯಶಸ್ವಿಯಾಗಿ ಮಾಡಿರುವ ಕೆಲಸವನ್ನು ಪ್ರಶಂಸೆ ಮಾಡಿ. ಹಾಗೆಯೇ ಬೇರೆ ಕೆಲಸಗಳನ್ನೂ ಮಾಡುವಂತೆ ಕೋರಿ. ತಕ್ಷಣಕ್ಕೆ ಪ್ರತಿಫಲ ಸಿಗುತ್ತಿಲ್ಲವೆಂದರೆ ಬೇಸರಗೊಂಡು ನಿಮ್ಮ ವರ್ತನೆಗಳನ್ನು ತಟ್ಟನೆ ಬದಲಿಸಿಬಿಡಬೇಡಿ. ಪ್ರತಿಯೊಂದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಅದರದೇ ವೇಗದ ಗತಿಯನ್ನು ಹೊಂದಿರುತ್ತದೆ. ನಿಮಗೆಟಕುವ ಆಪ್ತ ಸಮಾಲೋಚಕರನ್ನು ಗುರುತಿಕೊಂಡು ಅವರಲ್ಲಿ ನಿಮ್ಮ ವಿಷಯದ ಕುರಿತು ಆಗ್ಗಿಂದಾಗ್ಗೆ ಮಾತಾಡುತ್ತಿರಿ.

ನಿಮ್ಮಲ್ಲಿ, ನಿಮ್ಮ ಕುಟುಂಬದಲ್ಲಿ, ನಿಮ್ಮ ಸಹದ್ಯೋಗಿಗಳಲ್ಲಿ, ನಿಮ್ಮ ಶಾಲೆಯಲ್ಲಿ; ಎಲ್ಲೇ ಆದರೂ ನೀವು ಈ ಜಿದ್ದುಗೇಡಿತನವನ್ನು ಕಂಡರೆ ತ್ವರಿತವಾಗಿ ಗಮನವನ್ನು ಕೊಡುವುದಷ್ಟೇ ಅಲ್ಲದೇ ಅದನ್ನು ನಿವಾರಿಸುವ ಅಥವಾ ನಿವಾರಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಜಿದ್ದುಗೇಡಿನ ಮಕ್ಕಳಾಗಲಿ ಅಥವಾ ವ್ಯಕ್ತಿಗಳಾಗಲಿ ರಚನಾತ್ಮಕ ಕೆಲಸಗಳಲ್ಲಿ ಹಿಂದುಳಿಯುತ್ತಾರೆ. ಅವರ ಕೆಲಸಗಳನ್ನು ಫಲಭರಿತವಾಗಿ ಮಾಡುವುದಿಲ್ಲ. ಅವರಿಂದಾಗಿ ವ್ಯಕ್ತಿಗತವಾದ ಸಂಬಂಧಗಳಲ್ಲಿ, ಕುಟುಂಬಗಳಲ್ಲಿ, ಕೆಲಸ ಮಾಡುವ ಅಥವಾ ಓದುವ ಕ್ಷೇತ್ರಗಳಲ್ಲಿ ಮತ್ತು ಸಮಾಜದಲ್ಲಿ ಸಂಘರ್ಷಗಳು ಉಂಟಾಗುತ್ತಿರುತ್ತವೆ. ಅವರು ಸಮಾಜ ಘಾತುಕ ಶಕ್ತಿಗಳಾಗಿಯೂ ಕೂಡಾ ರೂಪುಗೊಳ್ಳಬಹುದು. ಅವರ ಹಠಾತ್ ವರ್ತನೆಗಳಿಂದ ನಾನಾ ಬಗೆಯ ಸಮಸ್ಯೆಗಳು ಉಂಟಾಗಬಹುದು.

ಮುಖ್ಯವಾಗಿ ಅವರ ಹಠಾತ್ ಪ್ರವೃತ್ತಿಯೇ (ಇಂಪಲ್ಸಿವ್ ಡಿಸಾರ್ಡರ್) ಹೆಚ್ಚುತ್ತಾ ಹೋಗಬಹುದು. ಮಾದಕ ವಸ್ತುಗಳ ವ್ಯಸನಕ್ಕೆ ಜಾರಬಹುದು. ಜಿದ್ದುಗೇಡಿನ ಜೊತೆಗೆ ಕುಡಿತ, ಮಾದಕವಸ್ತುಗಳ ವ್ಯಸನಗಳು ಮತ್ತು ಅನಿಯಂತ್ರಿತ ಲೈಂಗಿಕ ಇಚ್ಛೆಯ ಸಮಸ್ಯೆಗಳೂ ಸೇರಿದರೆ ವ್ಯಕ್ತಿ ಮತ್ತು ವಾತಾವರಣ ಇನ್ನೂ ಭಯಾನಕವಾಗುತ್ತಾ ಹೋಗುತ್ತದೆ. ಪರಿಸ್ಥಿತಿ ಬಿಗಡಾಯಿಸುತ್ತಾ ಹೋಗುತ್ತದೆ. ಆ ವ್ಯಕ್ತಿಯನ್ನು ಉಳಿಸಿಕೊಳ್ಳುವುದಕ್ಕಿಂತ ಆ ಜೀವ ಯಾವಾಗ ಹೋಗುತ್ತದೆಯೋ ಎಂಬುವಷ್ಟರ ಮಟ್ಟಿಗೆ ಪರಿಸ್ಥಿತಿ ಮತ್ತು ಮನಸ್ಥಿತಿ ಬರ್ಬರವಾಗುತ್ತದೆ. ಜಿದ್ದುಗೇಡಿತನ ತೀವ್ರವಾದಂತೆ ವ್ಯಕ್ತಿಯು ತನ್ನ ಹಟಮಾರಿತನದ ತೃಪ್ತಿಗೆ ಸೂಕ್ತವಾದ ಅವಕಾಶ ಸಿಗದೇ ಹೋದಾಗ ಉದ್ವೇಗದಿಂದ ಆತ್ಮಹತ್ಯೆಯನ್ನು ಕೂಡಾ ಮಾಡಿಕೊಳ್ಳಬಹುದು. ಕೆಲವೊಮ್ಮೆ ಕೊಲೆಗಡುಕರೂ ಆಗಬಹುದು, ಹೇಳಲಾಗುವುದಿಲ್ಲ. ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಹಾಗಾಗಿಯೇ ಜಿದ್ದುಗೇಡಿನ ಮಕ್ಕಳಾಗಲಿ, ವಯಸ್ಕರಾಗಲಿ ನಮ್ಮೊಡನೆ ಇದ್ದಾರೆ ಎಂದು ತಿಳಿದರೆ ನಾವು ಪ್ರೀತಿ, ಕರುಣೆ, ಸಹನೆ, ಶಿಸ್ತು, ಬದ್ಧತೆ ಇತ್ಯಾದಿ ಅಗತ್ಯ ಮೌಲ್ಯಗಳನ್ನೆಲ್ಲಾ ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡುವುದು ಅಗತ್ಯ ಮತ್ತು ಅನಿವಾರ್ಯ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಸೇತುವೆ ಮೇಲಿಂದ ಬಸ್ ಬಿದ್ದು 8 ಪ್ರಯಾಣಿಕರ ಮೃತ್ಯು ಮುದ್ದುಲಕ್ಷ್ಮೀ ಧಾರವಾಹಿಯ ಕಿರುತೆರೆ ನಟ ಬೆಂಗಳೂರಿನಲ್ಲಿ ಅರೆಸ್ಟ್! ಬೆಂಗಳೂರು: ಕ್ಯಾಂಟರ್ ಗೆ ಡಿಕ್ಕಿ ಹೊಡೆದು ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಸವಾರರ ಸಾವು ಆರ್ಥಿಕವಾಗಿ ದೇಶದ ಗೌರವ ಕಾಪಾಡಿದ ಮನಮೋಹನ್ ಸಿಂಗ್: ಭಾವುಕರಾದ ಹೆಚ್.ಡಿ. ದೇವೇಗೌಡ ಸಂಸತ್ ಭವನದ ಮುಂದೆ ಬೆಂಕಿ ಹಚ್ಚಿಕೊಂಡಿದ್ದ 26 ವರ್ಷದ ಯುವಕ ಸಾವು Annamalai ಛಾಟಿಯಲ್ಲಿ ಹೊಡೆದುಕೊಂಡು ಅಣ್ಣಾಮಲೈ ಪ್ರತಿಭಟನೆ! ಸ್ಟೀವನ್ ಸ್ಮಿತ್ ಸತತ ೨ನೇ ಶತಕ: ಕುಸಿದ ಭಾರತದ ಮೇಲೆ ಆಸ್ಟ್ರೇಲಿಯಾ ಹಿಡಿತ! 10 ಗಂಟೆ ಹೃದಯ ಶಸ್ತ್ರಚಿಕಿತ್ಸೆ ನಂತರ ಮನಮೋಹನ್ ಸಿಂಗ್ ಕೇಳಿದ ಮೊದಲ ಪ್ರಶ್ನೆ ಏನು ಗೊತ್ತಾ? ಮನೆಯಲ್ಲೇ ಪ್ರಜ್ಞಾಹೀನರಾಗಿದ ಮನಮೋಹನ್ ಸಿಂಗ್: ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೇಳಿದ್ದೇನು? ದೇಶದ ಆರ್ಥಿಕ ಹರಿಹಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ