Thursday, May 14, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ದಿನ ರಾತ್ರಿ 1 ಗಂಟೆಯೊಳಗೆ ಪಬ್, ರೆಸ್ಟೋರೆಂಟ್ ಬಂದ್: ರೇವ್ ಪಾರ್ಟಿ...

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ದಿನ ರಾತ್ರಿ 1 ಗಂಟೆಯೊಳಗೆ ಪಬ್, ರೆಸ್ಟೋರೆಂಟ್ ಬಂದ್: ರೇವ್ ಪಾರ್ಟಿ ಮೇಲೆ ಪೊಲೀಸ್ ಕಣ್ಗಾವಲು

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ದಿನ ಅಂದರೆ ಡಿಸೆಂಬರ್ 31ರಂದು ರಾತ್ರಿ 1 ಗಂಟೆಯೊಳಗೆ ಪಬ್, ಬಾರ್, ರೆಸ್ಟೋರೆಂಟ್ ಮುಚ್ಚಲು ಆದೇಶಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿದ ಮತ್ತಿನಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್​ ಮಾಡಲಾಗುತ್ತದೆ ಎಂದರು.

ಹೊಸ ವರ್ಷಾಚರಣೆ ದಿನ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಮಾದಕ ಜಾಲದ ಮೇಲೂ ಕೂಡ ಕಣ್ಣಿಡಲಾಗಿದೆ. ಈಗಾಗಲೇ‌ ಮೂವರು ವಿದೇಶಿ ಡ್ರಗ್ ಪೆಡ್ಲರ್ ಸೇರಿದಂತೆ‌ 70 ಜನರನ್ನು ಬಂಧಿಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಹೊರ ವಲಯದಲ್ಲಿ ನಡೆಯುವ ರೇವ್ ಪಾರ್ಟಿ ಸೇರಿದಂತೆ ಎಲ್ಲ ಪಾರ್ಟಿಗಳ ಮೇಲೆ ಕಣ್ಣಿಡಲಾಗಿದೆ. ಇನ್ನು, ನಗರದಲ್ಲಿ ಎಂಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಹೆಚ್ಚು ಜನರು ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಬ್ರಿಗೆಡ್, ಎಂಜಿ ರೋಡ್​​ನಲ್ಲಿ ಏಕಮುಖ ಸಂಚಾರವಿರುತ್ತದೆ. ಡಿಸೆಂಬರ್​ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ.  ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸೈಬರ್ ವಂಚನೆಗೆ ಒಳಗಾಗಿದ್ದರೆ ಟೋಲ್ ಫ್ರೀ ನಂಬರ್ 1930ಗೆ ಕರೆ ಮಾಡಿ ಮಾಹಿತಿ ನೀಡಿ. ಅದನ್ನ ಹೊರತುಪಡಿಸಿ ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ನಂಬರ್​​ಗೆ ಕರೆ ಮಾಡಬೇಡಿ. ಏಕೆಂದರೆ, ಅಧಿಕಾರಿಗಳು ಬೇರೆ ಕೆಲಸದಲ್ಲಿ ನಿರತರಾಗಿದ್ದರೆ ಕೂಡಲೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, 1930 ಕರೆ ಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments