ಸಂಘಟಿತ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 4 ವಿಕೆಟ್ ಗಳಿಂದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಮತ್ತಷ್ಟು ಹತ್ತಿರವಾಗಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು. ಸಾಧಾರಣ ಗುರಿ ಬೆಂಬತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 10 ಪಂದ್ಯಗಳಲ್ಲಿ 6 ಗೆಲುವು, 4 ಸೋಲಿನೊಂದಿಗೆ 12 ಅಂಕದೊಂದಿಗೆ 3ನೇ ಸ್ಥಾನಕ್ಕೆ ಲಗ್ಗೆ ಹಾಕುವ ಮೂಲಕ ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾದರೆ, ಮುಂಬೈ ಇಂಡಿಯನ್ಸ್ 10 ಪಂದ್ಯಗಳಿಂದ 3 ಗೆಲುವು ಮತ್ತು 7 ಸೋಲಿನೊಂದಿಗೆ 6 ಅಂಕದೊಂದಿಗೆ 9ನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಪ್ಲೇಆಫ್ ರೇಸ್ ನಿಂದ ಬಹುತೇಕ ಹೊರಬಿದ್ದಿದೆ.
ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಘಾತ ಅನುಭವಿಸಿದರೂ ಕೆಎಲ್ ರಾಹುಲ್ (28) ಮತ್ತು ಮಾರ್ಕೂಸ್ ಸ್ಟೋನಿಸಿಸ್ 2ನೇ ವಿಕೆಟ್ ಗೆ 58 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು. ಸ್ಟೋನಿಸಿಸ್ 45 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 62 ರನ್ ಬಾರಿಸಿದರು.