ಮಾಜಿ ಭೂಗತಪಾತಕಿ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ಮೂಗು-ಕೈಗೆ ಗುಂಡು ತಗುಲಿದ್ದು, ಕೂದಲೆಳೆ ಅಂತರದಿಂದ ಪಾರಾದ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಬಿಡದಿ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಕ್ಕಿ ರೈ ಮೇಲೆ ಭಾನುವಾರ ರಾತ್ರಿ 10.30ರ ಸುಮಾರಿಗೆ ಮನೆಯ ಬಳಿ ಅಡಗಿ ಕುಳಿತಿದ್ದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಬೆಂಗಳೂರಿಗೆ ಆಗಮಿಸುತ್ತಿದ್ದ ರಿಕ್ಕಿ ರೈ ಸ್ವತಃ ಕಾರು ಚಲಾಯಿಸುವುದನ್ನು ಅರಿತಿದ್ದ ದುಷ್ಕರ್ಮಿ ಕಾರಿನ ಮುಂಭಾಗವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾನೆ. ಆದರೆ ರಿಕ್ಕಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದರಿಂದ ದಾಳಿಯಲ್ಲಿ ಪಾರಾಗಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ರಷ್ಯಾದಿಂದ ಮರಳಿದ್ದ ರಿಕ್ಕಿ ರೈ, ರಿಯಲ್ ಎಸ್ಟೇಟ್ ಕಾರ್ಯದಲ್ಲಿ ತೊಡಗಿದ್ದು, ಬಿಡದಿಯ ತಮ್ಮ ಮನೆಯ ಗೇಟ್ ನಿಂದ ಹೊರಗೆ ಕಾರಿನಲ್ಲಿ ಬರುತ್ತಿದ್ದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ರಿಕ್ಕಿ ಕೈ ಮತ್ತು ಮೂಗಿಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಕ್ಕಿ ಮೇಲೆ ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು, ಮುತ್ತಪ್ಪ ರೈ ಮೊದಲ ಪತ್ನಿ ಹಾಗೂ ಅವರ ಕಡೆಯವರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ ರಷ್ಯಾದಿಂದ ರಿಕ್ಕಿ ಬಂದಿದ್ದು, ಹಾಗೂ ಹೊರಗೆ ಹೋಗುವ ಮಾಹಿತಿ ದುಷ್ಕರ್ಮಿಗೆ ತಿಳಿದಿತ್ತು ಎಂದರೆ ಅದು ಆಪ್ತ ವಲಯದಲ್ಲಿ ಇರುವವರೇ ಇರಬೇಕು ಎಂದು ಶಂಕಿಸಲಾಗಿದೆ.



