ನಾಯಕ ಸ್ಯಾಮ್ ಕರ್ರನ್ ಹೋರಾಟದ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ 5 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಪ್ಲೇಆಫ್ ರೇಸ್ ನಿಂದ ಹೊರಬಿದ್ದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಿತು.
ಗುವಾಹತಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 144 ರನ್ ಗಳಿಸಿತು. ಸಾಧಾರಣ ಮೊತ್ತ ಬೆಂಬತ್ತಿದ ಪಂಜಾಬ್ ಕಿಂಗ್ಸ್ 18.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಸತತ 4ನೇ ಸೋಲಿನೊಂದಿಗೆ ಪ್ಲೇಆಫ್ ಗೆ ಅಗತ್ಯವಾದ 18 ಅಂಕ ಇನ್ನೂ ಗಳಿಸಿಲ್ಲ. ಆದರೆ 13 ಪಂದ್ಯಗಳಲ್ಲಿ 8 ಜಯ ಹಾಗೂ 5 ಸೋಲಿನೊಂದಿಗೆ 16 ಅಂಕ ಕಲೆ ಹಾಕಿ ಎರಡನೇ ಸ್ಥಾನದಲ್ಲಿದ್ದರೂ ಪ್ಲೇಆಫ್ ಗೆ ಬಹುತೇಕ ಸ್ಥಾನ ಖಚಿತವಾಗಿದ್ದರೂ ಅಧಿಕೃತವಾಗಿ ಪ್ರವೇಶ ಪಡೆದಿಲ್ಲ.
ಪಂಜಾಬ್ ತಂಡ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. 48 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನಾಯಕ ಸ್ಯಾಮ್ ಕರ್ರನ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಬಾರಿಸಿ ಗೆಲುವು ತಂದುಕೊಟ್ಟರು.