ಮುಂಬೈ: 2027ರ ಏಕದಿನ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಆಡುವುದು ಅನುಮಾನ ಎಂದು ಭಾರತದ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಟಿ-20 ಕ್ರಿಕೆಟ್ ಗೆ ಜೊತೆಯಾಗಿ ವಿದಾಯ ಘೋಷಿಸಿದ್ದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಪ್ರತಿಷ್ಠಿತ ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನ ದಿಢೀರನೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಇಬ್ಬರೂ ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಆದರೆ ಅವರು ಭಾರತ ತಂಡದಲ್ಲಿ ಎಷ್ಟು ದಿನ ಮುಂದುವರಿಯುತ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
ಇದೇ ವೇಳೆ ವೀಕ್ಷಕ ವಿವರಣೆಗಾರರೂ ಆಗಿರುವ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್, ವಾಸ್ತವವಾಗಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಗೆ ಹಲವು ವರ್ಷಗಳ ಮುನ್ನವೇ ತಯಾರಿ ನಡೆಯತ್ತಿದೆ. ಆಟಗಾರರ ಆಯ್ಕೆಯಿಂದ ಹಿಡಿದು ಪ್ರತಿಯೊಂದು ಅಳೆದು ತೂಗಿ ನೋಡಲಾಗುತ್ತದೆ. ಆದರೆ ಈಗಾಗಲೇ ಟಿ-20 ಮತ್ತು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿರುವ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸುವುದು ಕಷ್ಟವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ವಿಶ್ವಕಪ್ ಗೆ ಭಾರತ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಇವರ ಲಭ್ಯತೆ ಬಗ್ಗೆ ಈಗಲೇ ಖಚಿತತೆ ಪಡೆಯಬೇಕಿದೆ. ಅಲ್ಲದೇ ಟೂರ್ನಿಗೆ ಇನ್ನೂ ಎರಡು ವರ್ಷ ಇರುವುದರಿಂದ ಅವರ ಪ್ರದರ್ಶನ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಅದನ್ನು ಅವರು ಹೇಗೆ ಸಾಬೀತುಪಡಿಸುತ್ತಾರೆ ಅಥವಾ ಹೇಗೆ ಆಯ್ಕೆ ಸಮಿತಿ ಪರಿಗಣಿಸುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.
ನಾವು ವಾಸ್ತವವಾದಿ. ಮುಂದಿನ ವರ್ಷ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹಾಗಿರುವಾಗ ವಿಶ್ವಕಪ್ ತಂಡದ ಬಗ್ಗೆ ಊಹಿಸಲು ಕಷ್ಟ. ಆದರೆ ಇಬ್ಬರು ಶತಕಗಳ ಮೇಲೆ ಶತಕ ಬಾರಿಸುತ್ತಿದ್ದರೆ ತಂಡದಿಂದ ಹೊರಗಿಡಲು ದೇವರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.



