ಬೈಕ್ ರಸ್ತೆಗೆ ತಿರುಗಿಸಲು ಅಡ್ಡ ನಿಂತಿದೆ ಎಂಬ ಕಾರಣಕ್ಕೆ ಆಟೋವನ್ನು ನ್ಯೂಟ್ರಲ್ ಮಾಡಿ ಇಳಿಜಾರಿನಲ್ಲಿ ಕಿಡಿಗೇಡಿಯೊಬ್ಬ ಬಿಟ್ಟ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಟೋವನ್ನು ನ್ಯೂಟ್ರಲ್ ಮಾಡಿ ಹಿಮ್ಮುಖವಾಗಿ ಇಳಿಜಾರಿನಲ್ಲಿ ಚಲಿಸಲು ಬಿಟ್ಟಾಗ ಆಟೋದಲ್ಲಿ ಪುಟಾಣಿ ಮಕ್ಕಳು ಇದ್ದು, ಅವರ ಪ್ರಾಣವನ್ನು ಅಪಾಯಕ್ಕೆ ಕಿಡಿಗೇಡಿ ಒಡ್ಡಿದ ಘಟನೆ ಬೇಲೂರು ಪಟ್ಟಣದ ನೆಹರು ನಗರದಲ್ಲಿ ಭಾನುವಾರ ನಡೆದಿದೆ.
ಹಾಸನ ಮೂಲದ ವ್ಯಕ್ತಿ ತಮ್ಮ ಆಟೋವನ್ನು ಅಂಗಡಿಯ ಮುಂದೆ ನಿಲ್ಲಿಸಿ ಒಳಗೆ ತೆರಳಿದ್ದರು. ಈ ವೇಳೆ ಬೈಕ್ ತೆಗೆದುಕೊಂಡು ಹೋಗಲು ಬಂದ ಯುವಕನಿಗೆ ಆಟೋ ಅಡ್ಡಿಯಾಗಿತ್ತು.
ಕೆಲ ನಿಮಿಷ ಕಾದ ಬಳಿಕ, ಯುವಕ ಆಟೋವನ್ನು ನ್ಯೂಟ್ರಲ್‌ಗೆ ಹಾಕಿ ಬಿಟ್ಟಿದ್ದಾನೆ. ಇದರಿಂದ ಆಟೋ ಹಿಮ್ಮುಖವಾಗಿ ಚಲಿಸತೊಡಗಿದೆ. ಇದರಿಂದ ಆಟೋದೊಳಗೆ ಕುಳಿತಿದ್ದ ಪುಟ್ಟ ಮಕ್ಕಳ ಜೀವಕ್ಕೆ ಅಪಾಯ ಉಂಟಾಗಿತ್ತು.
ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ಹಾಗೂ ಸ್ಥಳದಲ್ಲಿದ್ದವರು ಓಡಿಹೋಗಿ ಆಟೋವನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಮಕ್ಕಳು ಅಪಾಯದಿಂದ ಪಾರಾಗಿವೆ. ಆದರೆ, ಯುವಕ ತನ್ನ ಬೈಕ್‌ನಲ್ಲಿ ತನ್ನ ಪಾಡಿಗೆ ತಾನು ತೆರಳಿದ್ದಾನೆ. ಈ ಘಟನೆಯ ದೃಶ್ಯ ಸ್ಥಳದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಈ ಕೃತ್ಯ ಎಸಗಿದ ಐರವಳ್ಳಿ ಗ್ರಾಮದ ಯುವಕ ಕೀರ್ತಿ ಎಂದು ತಿಳಿದು ಬಂದಿದ್ದು ಆತನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.



