ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ತಿಯಾದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ಜೂನ್ ನಲ್ಲಿಯೇ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ದಾಖಲೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಕೆಆರ್ ಎಸ್ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ಸ್ಥಳೀಯ ಶಾಸಕರು ಬಾಗಿನ ಅರ್ಪಿಸಿದರು.
84 ವರ್ಷಗಳ ಇತಿಹಾಸದಲ್ಲಿ ಕೃಷ್ಣರಾಜ ಸಾಗರ ಜಲಾಶಯವು ಜೂನ್ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಅಲ್ಲದೇ 93 ವರ್ಷಗಳ ಇತಿಹಾಸದಲ್ಲೇ ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಿದ ಮೊದಲ ಸಿಎಂ ಗೌರವಕ್ಕೆ ಸಿದ್ದರಾಮಯ್ಯ ಪಾತ್ರರಾದರು.
ಕೆಆರ್ ಎಸ್ ಜಲಾಶಯದಲ್ಲಿ ಗರಿಷ್ಠ 124.80 ಅಡಿಗಳ ಗರಿಷ್ಠ ಮಟ್ಟ ತಲುಪಿದ್ದು, 49,452 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 28,938 ಕ್ಯೂಸೆಕ್ ಒಳಹರಿವು ಮತ್ತು 28,681 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಕೆಆರ್‌ಎಸ್ ಜಲಾಶಯ ಹೀಗೆ ಭರ್ತಿಯಾಗಿರುವುದು ರೈತರು ಮತ್ತು ಸಾರ್ವಜನಿಕರಿಗೆ ಸಂತಸ ತಂದಿದ್ದು, ಈ ಬಾರಿ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗುವ ಮೂಲಕ ತಮಿಳುನಾಡು ಜೊತೆಗಿನ ಕಾವೇರಿ ವಿವಾದ ಬಗೆಹರಿದಿದೆ.
ಬಾಗಿನ ಅರ್ಪಿಸುವ ವೇಳೆ ಸಚಿವರಾದ ಚೆಲುವರಾಯಸ್ವಾಮಿ, ಎಚ್.ಸಿ. ಮಹದೇವಪ್ಪ ಹಾಗೂ ಇತರ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


