Monday, May 25, 2026
Google search engine
Homeರಾಜಕೀಯದೆಹಲಿಗೆ ಹಾರಿದ ಕೈ ನಾಯಕರು: ಗೊಂದಲಗಳಿಗೆ ಹೈಕಮಾಂಡ್ ತೆರೆ?

ದೆಹಲಿಗೆ ಹಾರಿದ ಕೈ ನಾಯಕರು: ಗೊಂದಲಗಳಿಗೆ ಹೈಕಮಾಂಡ್ ತೆರೆ?

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೋಮವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಮಂಗಳವಾರ ನಡೆಯುವ ಹೈವೋಲ್ಟೇಜ್ ಸಭೆಯಲ್ಲಿ ಹೈಕಮಾಂಡ್ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.

ಕಳೆದ ಒಂದು ವರ್ಷದಿಂದ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರಚನೆ, ಹೊಸ ಶಾಸಕರಿಗೆ ಮಂತ್ರಿ ಸ್ಥಾನ ಸೇರಿದಂತೆ ಹಲವು ಬೇಡಿಕೆಗಳು ಹೈಕಮಾಂಡ್ ಮುಂದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ, ಡಿಸಿಎಂ, ಸಚಿವರಾದ ಸತೀಶ್ ಜಾರಕಿಹೊಳಿ, ವೆಂಕಟೇಶ್ ಹಿಟ್ನಾಳ್, ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಮುಂತಾದವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ, ಮತ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ರಾಜ್ಯ ರಾಜಕೀಯದ ಗೊಂದಲಗಳ ಕುರಿತು ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಆಡಳಿತ ಮೂರು ವರ್ಷ ಪೂರೈಸಿದೆ. ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿತ್ತು. ಈ ಮಧ್ಯೆ ಹಿರಿಯ ಸಚಿವರು ಈ ಪವರ್ ಫೈಟ್ ಗೊಂದಲಕ್ಕೆ ತೆರೆ ಎಳೆಯುವಂತೆ ಹೈ ಕಮಾಂಡ್ ಮೇಲೆ ಒತ್ತಡ ಹೇರಿದ್ದರು.‌ ಇಲ್ಲವಾದರೆ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಮುಂದಿಟ್ಟಿದ್ದರು. ಹೀಗಾಗಿ ಹೈ ಕಮಾಂಡ್​ ಈ ಗೊಂದಲಕ್ಕೆ ತೆರೆ ಎಳೆಯುವಂತೆ ಪ್ರಬಲವಾಗಿ ಒತ್ತಾಯಿಸಿದ್ದರು.‌ ಕೊನೆಗೂ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಬಂದಿರುವ ಕಾರಣ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿದೆ.

ಪ್ರಮುಖವಾಗಿ ಸಿಎಂ ದೆಹಲಿ ಭೇಟಿಯಿಂದ ನಾಯಕತ್ವ ಬದಲಾವಣೆಯಾಗುತ್ತಾ ಅಥವಾ ಸಂಪುಟ ಪುನಾರಚನೆಯಾಗುತ್ತಾ ಎಂಬ ಕುತೂಹಲವನ್ನು ಮೂಡಿಸಿದೆ. ನಾಯಕತ್ವ ಬದಲಾವಣೆಗೆ ಡಿಸಿಎಂ ಡಿಕೆಶಿ ಆಪ್ತರ ಬಣ ಕಸರತ್ತು ನಡೆಸುತ್ತಿದ್ದರೆ, ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಬಣ ಒತ್ತಡ ತಂತ್ರ ಹೆಣೆಯುತ್ತಿದೆ. ದೆಹಲಿ ವರಿಷ್ಠರು ಇವೆರಡ ಪೈಕಿ ಯಾವುದಕ್ಕೆ ಮಣೆ ಹಾಕುತ್ತಾರೆ ಎಂಬುದೇ ರಾಜ್ಯ ಕಾಂಗ್ರೆಸ್ ಶಾಸಕರಲ್ಲಿನ ಕುತೂಹಲವಾಗಿದೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments