Monday, May 25, 2026
Google search engine
Homeಜಿಲ್ಲಾ ಸುದ್ದಿಮೂರಿನಕಟ್ಟೆ ಧ್ವಂಸ ಪ್ರಕರಣ: ಭಟ್ಕಳದಲ್ಲಿ 3 ದಿನ ನಿಷೇದಾಜ್ಞೆ ಜಾರಿ

ಮೂರಿನಕಟ್ಟೆ ಧ್ವಂಸ ಪ್ರಕರಣ: ಭಟ್ಕಳದಲ್ಲಿ 3 ದಿನ ನಿಷೇದಾಜ್ಞೆ ಜಾರಿ

ಕಾರವಾರ: ಭಟ್ಕಳದ ಪ್ರಸಿದ್ದ ‘ಮೂರಿನಕಟ್ಟೆ’ ಧ್ವಂಸ ಹಾಗೂ ಪುನ‌ರ್ ನಿರ್ಮಾಣದ ಸಂಬಂಧ ಎರಡು ಕೋಮುಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ‌ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಸೆಕ್ಷನ್ 144 ನಿಷೇಧಾಜ್ಞೆ ಹೊರಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆರಂಭವಾದಾಗಿನಿಂದಲೂ ಈ ಮುರಿನಕಟ್ಟೆ ವಿವಾದದ ಕೇಂದ್ರ ಬಿಂದುವಾಗಿತ್ತು.ನೂರಾರು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆ ಹೊಂದಿದ್ದ ಈ ಸ್ಥಳವನ್ನು ಹೆದ್ದಾರಿಗಾಗಿ ಬಿಟ್ಟುಕೊಡಲಾಗಿತ್ತು.

ರಸ್ತೆ ಅಗಲೀಕರಣದ ಬಳಿಕ, ಇದನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಒಂದು ವರ್ಗದವರು ಒತ್ತಾಯಿಸುತ್ತಿದ್ದರೆ, ಮೂಲ ಸ್ಥಳದಲ್ಲೇ ಮರುನಿರ್ಮಿಸಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಹಲವಾರು ಬಾರಿ ಮನವಿ ಮಾಡಿದರೂ ಇಲಾಖೆಯು ಪುನರ್ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ, ನಿನ್ನೆ ಬೆಳಗ್ಗೆ ಹಿಂದೂ ಸಂಘಟನೆಯ ನೂರಾರು ಕಾರ್ಯಕರ್ತರು ಒಟ್ಟಾಗಿ ಶ್ರದ್ಧಾ ಭಕ್ತಿಯಿಂದ ಕಟ್ಟೆಯನ್ನು ನಿರ್ಮಿಸಿದ್ದರು.

ಜಿದ್ದಾಜಿದ್ದಿ, ಕಟ್ಟೆ ಧ್ವಂಸ:

ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಮಜ್ಜಿಸೆ ಇಸ್ಲಾಹ್ ವ ತಂಝೀಮ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಉಪವಿಭಾಗಾಧಿಕಾರಿ ಜೆ. ಮಹೇಶ್ ಅವರು ಶಾಂತಿ ಸಭೆ ನಡೆಸಿ, ಇದು ಹೆದ್ದಾರಿಯ ಅತಿಕ್ರಮಿತ ಜಾಗ ಎಂದು ತಿಳಿಸಿದ್ದರು. ಅನ್ಯಕೋಮಿನ ಮುಖಂಡರು ಇದಕ್ಕೆ ಒಪ್ಪಿದರೂ, ರಾತ್ರಿ ವೇಳೆಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಹೆದ್ದಾರಿ ಬಂದ್:

ಸಾವಿರಾರು ಯುವಕರು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿ ಬಂದ್ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಡಿವೈಎಸ್ ಪಿ ಗಿರೀಶ್ ಯುವಕರನ್ನು ನಿಯಂತ್ರಿಸಲು ಮಾತುಕತೆ ನಡೆಸುತ್ತಿದ್ದಾಗಲೇ, ಕೆಲ ಯುವಕರು ಪೊಲೀಸರ ಎದುರೇ ಕಬ್ಬಿಣದ ಸಲಾಕೆಗಳಿಂದ ಮುರಿನಕಟ್ಟೆಯನ್ನು ಭಾಗಶಃ ಧ್ವಂಸಗೊಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ:

ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರಿಂದ ಮೇ 27ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡಬಾರದು ಎಂದು ಭಟ್ಕಳ ಎಸಿ ಮಹೇಶ್ ಆದೇಶ ಹೊರಡಿಸಿದ್ದಾರೆ.

ಮೇ 25ರಿಂದ 27ರವರೆಗೆ ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಮದ್ಯ ನಿಷೇಧ:

ಜೊತೆಗೆ, ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೇ 25 ರಂದು ಬೆಳಗ್ಗೆ 6 ಗಂಟೆಯಿಂದ ಮೇ. 27 ರಂದು ಬೆಳಗ್ಗೆ 6-00 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯದ ಅಂಗಡಿ ಮತ್ತು ಬಾರ್​​ಗಳನ್ನು ಬಂದ್ ಮಾಡಿ ಮದ್ಯ ಸಾಗಣೆ, ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಆದೇಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments