ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಪದೇಪದೆ ಸೋರಿಕೆಯಾದರೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಯಾವುದೇ ಪಾಠ ಕಲಿತಿಲ್ಲ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ರಜಾಕಾಲದ ಪೀಠವು ಸೋಮವಾರ ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು. ಈ ವರ್ಷ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ನಡೆದಿರುವುದಕ್ಕೆ ಪೀಠವು ಆಘಾತ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆಗಳು ರಾಜಸ್ಥಾನದಲ್ಲಿ ಪತ್ತೆಯಾದ ಗೆಸ್ ಪೇಪರ್ ನೊಂದಿಗೆ ಶೇಕಡಾ 100 ರಷ್ಟು ಹೊಂದಾಣಿಕೆಯಾಗಿದ್ದವು. ಹೀಗಾಗಿ ಮೇ 12 ರಂದು ಎನ್‌ಟಿಎ ನೀಟ್ ಯುಜಿ ಪರೀಕ್ಷೆಯನ್ನೇ ರದ್ದುಗೊಳಿಸಬೇಕಾಗಿ ಬಂದಿತು.
ಇದು ವ್ಯವಸ್ಥೆಯ ಸಂಪೂರ್ಣ ವೈಫಲ್ಯ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ ಪೀಠ, “ಹಿಂದಿನ ವಿವಾದಗಳ ನಂತರ ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ನಾವು ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದೆವು.
ಸಮಿತಿಯು ಕೆಲವು ಪ್ರಮುಖ ಶಿಫಾರಸುಗಳನ್ನು ನೀಡಿತ್ತು ಮತ್ತು ಅದನ್ನು ಒಪ್ಪಿಕೊಳ್ಳಲಾಗಿತ್ತು. ಆದರೆ, ಇಷ್ಟೆಲ್ಲಾ ಆದರೂ ಅವರು ತಮ್ಮ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂಬುದು ಅತ್ಯಂತ ವಿಷಾದನೀಯ” ಎಂದು ತೀವ್ರ ಅಸಮಾಧಾನ ಹೊರಹಾಕಿತು.
3 ದಿನಗಳಲ್ಲಿ ಅಫಿಡವಿಟ್
ಪರೀಕ್ಷಾ ಸುಧಾರಣೆಗಾಗಿ ಈ ಹಿಂದೆ ನ್ಯಾಯಾಲಯದ ಆದೇಶದಂತೆ ರಚಿಸಲಾಗಿದ್ದ ಉಸ್ತುವಾರಿ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಎನ್‌ಟಿಎ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಕುರಿತು ಗುರುವಾರದೊಳಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಕೋರ್ಟ್ ಕಡಾಖಂಡಿತವಾಗಿ ನಿರ್ದೇಶಿಸಿದೆ. ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರಾದ ಡಾ. ಕೆ. ರಾಧಾಕೃಷ್ಣನ್ ಅವರು ಪರೀಕ್ಷಾ ಸುರಕ್ಷತೆಯನ್ನು ಬಲಪಡಿಸಲು ಸೂಚಿಸಿದ್ದ ಕ್ರಮಗಳ ಅನುಷ್ಠಾನದ ಸ್ಥಿತಿಗತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಪೀಠ ತಿಳಿಸಿದೆ.
ಸ್ವಾಯತ್ತ ಸಂಸ್ಥೆಗೆ ಆಗ್ರಹ
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ಮರುಕಳಿಸುತ್ತಿರುವುದರಿಂದ, ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯಿಂದ ಎನ್‌ಟಿಎಯನ್ನು ಮುಕ್ತಗೊಳಿಸಬೇಕು. ಅದರ ಬದಲಿಗೆ ಅತ್ಯಂತ ದೃಢವಾದ, ಪಾರದರ್ಶಕ ಹಾಗೂ ಸ್ವಾಯತ್ತತೆಯನ್ನು ಹೊಂದಿರುವ ಹೊಸ ಸಂಸ್ಥೆಯನ್ನು ರಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಿಬಿಐನ ಪ್ರತಿಕ್ರಿಯೆಯನ್ನು ಕೇಳಿದೆ.
ಇಡೀ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಇಂತಹ ಗಂಭೀರ ಲೋಪದೋಷಗಳ ಕುರಿತು ನ್ಯಾಯಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಫಿಡವಿಟ್ ಸಲ್ಲಿಕೆಯಾದ ನಂತರ ಈ ಪ್ರಕರಣದ ಮುಂದಿನ ಸುಧಾರಣಾ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.



