ಬೆಟ್ಟಿಂಗ್ ಭೂತಕ್ಕೆ ಸಿಲುಕಿದ್ದ ಸಾಫ್ಟ್ ವೇರ್ ಇಂಜಿನಿಯರ್ ಅಪ್ಪನ ಆಸ್ತಿ ಮಾರಿದ್ದೂ ಸಾಕಾಗದೇ ಕಳ್ಳತನಕ್ಕೆ ಇಳಿದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಬಿಸಿಎ ಪದವೀಧರನಾಗಿದ್ದ ಕೆಎನ್ ಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದು ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ.
ಮಾಗಡಿ ಠಾಣೆ ಪೊಲೀಸರು ಮೂರ್ತಿಯನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆನ್ ಲೈನ್ ಬೆಟ್ಟಿಂಗ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಮುಳುಗಿದ್ದ ಕೆಎನ್ ಮೂರ್ತಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಹಾಗೂ ಆನ್ ಲೈನ್ ಬೆಟ್ಟಿಂಗ್ ನಲ್ಲಿ ಆಡಲು ಮೂರ್ತಿ ಕಳ್ಳತನ ಮತ್ತು ಸರಗಳ್ಳತನ ಆಯ್ಕೆ ಮಾಡಿಕೊಂಡಿದ್ದ.
ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿ ನೆಲೆಸಿದ್ದು, ಮಗ ಮಾಡಿಕೊಂಡ ಎಡವಟ್ಟಿನಿಂದ ಊರಿನಲ್ಲಿ ಜಮೀನು ಮಾರಿ ಸುಮಾರು 25 ಲಕ್ಷದವರೆಗೂ ಸಾಲ ತೀರಿಸಿದ್ದರು. ಇನ್ನಷ್ಟು ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.
ಇಷ್ಟಾದರೂ ಮಗನ ಆನ್ ಲೈನ್ ಬೆಟ್ಟಿಂಗ್ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಸುಲಭ ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಪರಾಧ ಎಸಗುವುದನ್ನ ಆರೋಪಿ ರೂಢಿಗತ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸರ ಕದ್ದ ಪ್ರಕರಣದಲ್ಲಿ ಮತ್ತೆ ಬಂಧಿತನಾದಾಗ ಕಳಚಿತು ಮುಖವಾಡ: ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿರುವಾಗ ಮಹಿಳೆ ಸರ ಕಸಿದುಕೊಂಡು ಈತ ಪರಾರಿಯಾಗಿದ್ದ.
ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ ಸ್ಪೆಕ್ಟರ್ ಜಿ. ಪಿ. ರಾಜು ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2022ರಿಂದಲೂ ರಾಜಗೋಪಾಲನಗರ, ಸುದ್ದುಗುಂಟೆಪಾಳ್ಯ, ಆವಲಹಳ್ಳ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತಿಳಿದುಬಂದಿದೆ ಎಂದರು.
ಕದ್ದ ಚಿನ್ನಾಭರಣವನ್ನ ಮಡಿವಾಳ, ಪರಪ್ಪನ ಅಗ್ರಹಾರ ಏರಿಯಾ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜ್ಯುವೆಲ್ಲರಿ ಶಾಪ್??ಗಳಲ್ಲಿ ಅಡವಿಟ್ಟು ಹಣ ಸಂಪಾದಿಸಿ ಬೆಟ್ಟಿಂಗ್ ಆಡುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.



