Sunday, May 31, 2026
Google search engine
Homeರಾಜಕೀಯ18‌ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್‌

18‌ ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್‌

ಬೆಂಗಳೂರು: ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಸೂಚಿಸಿ ಗಲಾಟೆ ಮಾಡಿದ್ದ ಆರೋಪದ ಮೇಲೆ 6 ತಿಂಗಳು ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದ್ದ ನಿರ್ಣಯ ಹಿಂಪಡೆದಿರುವುದನ್ನು ವಿಧಾನಸಭೆಯಲ್ಲಿ ಸೋಮವಾರ ಸ್ಥಿರೀಕರಿಸಲಾಯಿತು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸ್ಥಿರೀಕರಣ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿ ಬಿಜೆಪಿ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ದೊಡ್ಡನಗೌಡ ಪಾಟೀಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್.ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ.ಹರೀಶ್, ದೀರಜ್ ಮುನಿರಾಜು, ಡಾ.ಚಂದ್ರುಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಸೇರಿದಂತೆ 18 ಶಾಸಕರನ್ನು ಅಮಾನತು ಮಾಡಲಾಗಿತ್ತು ಎಂದರು.

ಬಿಜೆಪಿ 18 ಶಾಸಕರನ್ನು ಅಮಾನತುಗೊಳಿಸಿದ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಈ ಸ್ಥಿರೀಕರಣ ಪ್ರಸ್ತಾವಕ್ಕೆ ಸದನ ಅನುಮೋದನೆ ನೀಡಬೇಕು ಎಂದು ಕೋರಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ, ಧ್ವನಿಮತದ ಮೂಲಕ ಅನುಮೋದನೆ ಪಡೆಯಲಾಯಿತು.
ಸ್ಪೀಕರ್ ಖಾದರ್ ಗರಂ:
ಸಂತಾಪ ಸೂಚನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸದನದ ಒಳಗೆ ಅಲ್ಲಲ್ಲಿ ಓಡಾಡುತ್ತಾ ಸದಸ್ಯರೊಬ್ಬರ ಜೊತೆ ಮಾತನಾಡುತ್ತಿರುವುದಕ್ಕೆ ಸ್ಪೀಕರ್ ಖಾದರ್ ಗರಂ ಆದ ಘಟನೆ ವಿಧಾನಸಭೆಯಲ್ಲಿ ನಡೆಯಿತು.

ಸದನದಲ್ಲಿ ಸಂತಾಪ ಕಲಾಪ ನಡೆಯುತ್ತಿದೆ. ಇದಕ್ಕೊಂದು ಪಾವಿತ್ರ್ಯತೆ ಬೇಡವೇ, ನೀವು ಹೀಗೆ ಮಾತನಾಡುವುದು ಸರಿಯಲ್ಲ. ಸದನದ ಹೊರಗೆ ಹೋಗಿ ಮಾತನಾಡಿ ಎಂದು ಸಿಟ್ಟಿನಿಂದ ಹೇಳಿದರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಚಿವ ತಂಗಡಗಿಯವರಿಗೆ ತಮ್ಮ ಆಸನಕ್ಕೆ ಬರುವಂತೆ ಹೇಳಿದರು. ಆಗ ಎದ್ದು ನಿಂತ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು ಶಿವರಾಜ್ ತಂಗಡಿ ಅವರು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರು ಎಂದು ಛೇಡಿಸಿದರು.

ಈ ಮಧ್ಯೆ ಸಂತಾಪ ಸೂಚನಾ ನಿರ್ಣಯದ ಮೇಲಿನ ತಮ್ಮ ಮಾತನ್ನು ಸಿಎಂ ಸಿದ್ದರಾಮಯ್ಯ ಮುಂದುವರೆಸಿದರು. ಇದಾದ ಬಳಿಕವೂ ಸದಸ್ಯರು ಎದ್ದುನಿಂತು ತಮ್ಮ ತಮ್ಮಲ್ಲೇ ಮಾತನಾಡುತ್ತಿರುವುದನ್ನು ಗಮನಿಸಿದ ಸ್ಪೀಕರ್, ಅಂತಹ ಸದಸ್ಯರ ಹೆಸರು ಹಿಡಿದು ತಮ್ಮ ತಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments