ಸಾಲ ತೀರಿಸಲು ಸ್ನೇಹಿತೆಯ ಹತ್ಯೆಗೈದು ಆಕೆ ಧರಿಸಿದ್ದ ಚಿನ್ನಾಭರಣ ದೋಚಿ ಮೃತದೇಹ ಬಿಸಾಕಿ ಆಟೋ ಚಾಲಕನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಆಟೊ ಚಾಲಕನಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿರೂಪಸಂದ್ರದ ನಿವಾಸಿ ರಾಕೇಶ್ ಹಾಗೂ ಕೊಲೆಗೆ ಸಹಕರಿಸಿದ ಸ್ನೇಹಿತೆ ಅಂಜಲಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಸಹಚರರಾದ ನವೀನ್ ಹಾಗೂ ನಿಹಾರಿಕಾಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಗಸ್ಟ್ 16 ರಂದು ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆ ಬಳಿ ಮಹಿಳೆಯ ಶವ ಪತ್ತೆಯಾಗಿತ್ತು. ಅದು ಆಂಧ್ರದ ಹಿಂದೂಪುರದ ಅರ್ಚನಾ ಎಂಬಾಕೆಯ ಶವ ಎಂದು ಗುರುತು ಪತ್ತೆಯಾಗಿತ್ತು.
ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿದ್ದು, ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್‍ಐ ಮೃತಳ ಮೊಬೈಲ್ ಫೋನ್ ಪರಿಶೀಲಿಸಿದಾಗ ಆರ್ಚನಾ ಕಾಣೆಯಾದ ದಿನ ರಾಕೇಶ್ ಹಲವು ಬಾರಿ ಕರೆ ಮಾಡಿದ್ದು ತಿಳಿದು ಬಂದಿದೆ.
ರಾಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಸಾಲ ಪಡೆದಿದ್ದ ಆಟೊಗೆ ಇಎಂಐ ಮೂರು ತಿಂಗಳಿಂದ ಕಟ್ಟಿರಲಿಲ್ಲ. ಬೈಕ್ ಮೇಲೆ 30,000 ಸಾಲವಿದೆ, ಕೈ ಸಾಲ ಇದೆ. ಇವೆಲ್ಲವನ್ನು ತೀರಿಸಲು ಸ್ನೇಹಿತೆಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೊಲೆಯಾದ ಅರ್ಚನಾ ಸಮಾರಂಭಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದರೆ ಆಟೋ ಓಡಿಸುವ ಜೊತೆಗೆ ರಾಕೇಶ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ. ಇದರಿಂದ ಇಬ್ಬರು ಪರಿಚಿತರಾಗಿ ಸ್ನೇಹ ಬೆಳೆಸಿಕೊಂಡಿದ್ದರು. ಇತ್ತೀಚೆಗೆ ವೀಡಿಯೊ ಕಾಲ್ ಮಾಡಿ ಮಾತನಾಡುವಾಗ ಅರ್ಚನಾಳ ಕತ್ತಲ್ಲಿದ್ದ ಮಾಂಗಲ್ಯ ಸರ ನೋಡಿ ಆಕೆಯ ಕೊಲೆಗೆ ನಿರ್ಧರಿಸಿದ್ದ ಎಂದು ಹೇಳಿದ್ದಾನೆ.
ಗೆಳತಿ ನಿಹಾರಿಕಾ ಬಳಿ ಕಷ್ಟ ಹೇಳಿಕೊಂಡು ನನ್ನ ಫ್ರೆಂಡ್ ಅರ್ಚನಾ ಹತ್ತಿರ ಇರುವ ಚಿನ್ನದ ಸರವನ್ನು ಕೊಲೆ ಮಾಡಿಯಾದರೂ ತಗೊಬೇಕು. ಅದಕ್ಕಾಗಿ ನಿನ್ನ ಸಹಾಯ ಬೇಕು ಎಂದು ಮತ್ತೊಬ್ಬ ಸ್ನೇಹಿತೆ ನಿಹಾರಿಕಾ ಬಳಿ ಕೇಳಿಕೊಂಡಿದ್ದ. ನಿಹಾರಿಕಾ ತನ್ನ ಸ್ನೇಹಿತೆ ಅಂಜಲಿ ಎಂಬಾಕೆಯನ್ನು ಕಳಿಸಿಕೊಟ್ಟಿದ್ದಾಳೆ. ಅಂಜಲಿ ಸ್ನೇಹಿತ ನವೀನ್ ಎಂಬಾತನನ್ನು ಕೂಡ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ.
ಅಂಜಲಿ ವಾಸವಿದ್ದ ಪಿಜಿ ಮಾಲೀಕರಿಂದ ಸ್ನೇಹಿತೆಯ ನೋಡಲು ಹಿಂದೂಪುರಕ್ಕೆ ಹೋಗಲು ರಾಕೇಶ ಕಾರು ತೆಗೆದುಕೊಂಡು ಹೋಗಿದ್ದ. ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನ ಬಾ ಊಟಕ್ಕೆ ಹೋಗಿ ಬರೋಣ ಎಂದು ಕಾರು ಹತ್ತಿಸಿಕೊಂಡಿದ್ದಾರೆ.
ಎಲ್ಲರೂ ಹಿಂದೂಪುರದಲ್ಲೇ ಫೋನ್‍ಗಳನ್ನು ಸ್ವಿಚ್ ಅಫ್ ಮಾಡಿಕೊಂಡಿದ್ದು, ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಗ್ರಾಮದ ಬಳಿ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದರು.
ಅರ್ಚನಾ ಧರಿಸಿದ್ದ ಮಾಂಗಲ್ಯಸರ ಹಾಗೂ ಒಲೆಯನ್ನು ಫೈನಾನ್ಸ್‌ನಲ್ಲಿ 2.19 ಲಕ್ಷ ರೂ.ಗೆ ಅಡ ಇಟ್ಟು ರಾಕೇಶ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿದ್ದರು ಎಂದು ಚಿಕ್ಕಬಳ್ಳಾಪುರ ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.



