ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಈ ಮೂಲಕ ತಾವು ರಿಯಾಲಿಟಿ ಶೋನಲ್ಲಿ ಆಡಿದ ಮಾತಿನಿಂದ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಮೇ ತಿಂಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಶಿವರಾಜ್ಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ಅವರುಗಳ ಬಗ್ಗೆ ಕಿರುತೆರೆ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರೋ ಆಡಿಯೋ ವೈರಲ್ ಆಗಿ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಅತ್ಯಾಚಾರ ಆರೋಪದ ನಡುವೆ ಮಡೆನೂರು ಮನು ವಿರುದ್ಧ ಈ ಆಡೀಯೋ ವಿವಾದ ಸಾಕಷ್ಟು ಅಭಿಮಾನಿಗಳನ್ನು ಕೆರಳಿಸಿತ್ತು. ಗಂಭೀರ ಆರೋಪಗಳಿಂದಾಗಿ ತತ್ತರಿಸಿದ್ದ ಮಡೆನೂರು ಮನು ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಶಿವಣ್ಣ ಮನೆಗೆ ತೆರಳಿ ಕ್ಷಮೆಯಾಚಿಸಲು ತೆರಳಿದ್ದರು. ಆದರೆ ಶಿವರಾಜ್ ಕುಮಾರ್ ಭೇಟಿಗೆ ಅವಕಾಶ ನೀಡದೇ ನಿರಾಸೆಯಿಂದ ಇಡೀ ದಿನ ಕಾದು ಮರಳಿದ್ದರು.
ಸೋಮವಾರ ಬೆಂಗಳೂರಿನಲ್ಲಿ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕಾರಿನಿಂದ ಇಳಿಯುತ್ತಿದ್ದಂತೆ, ಅವರ ಕಾಲಿಗೆ ಬಿದ್ದು, ಭಾವುಕರಾಗಿ ಮಡೆನೂರು ಮನು ಕ್ಷಮೆ ಕೇಳಿದ್ದಾರೆ. ಶಿವಣ್ಣ ಕೂಡಾ ಅವರ ತಪ್ಪನ್ನು ಕ್ಷಮಿಸಿ, ಸಿನಿಮಾ ಕೆಲಸಗಳಿಗೆ ಶುಭ ಕೋರಿದ್ದಾರೆ. ‘ಯಾರೇ ಬೈದ್ರೂ, ಹೊಗಳಿದ್ರೂ, ತೆಗಳಿದ್ರೂ ಅವನ್ನು ಮನಸ್ಸಿಗೆ ತೆಗೆದುಕೊಳ್ಳೋದಿಲ್ಲ’ ಎಂದು ಶಿವಣ್ಣ ತಿಳಿಸುತ್ತಿದ್ದಂತೆ, ಅಲ್ಲಿದ್ದವರು ‘ದೇವರು ಅಣ್ಣ ನೀವು’ ಎಂದು ತಿಳಿಸಿದ್ದಾರೆ.
ನಿಮ್ಮ ಬೆಂಬಲ ಇದ್ರೆ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮರು ಬಿಡುಗಡೆ ಮಾಡುತ್ತೇವೆ ಎಂದು ಮಡೆನೂರು ಮನು ತಿಳಿಸುತ್ತಿದ್ದಂತೆ, ಮಾಡಿ ಒಳ್ಳೆ ಶೀರ್ಷಿಕೆಯ ಸಿನಿಮಾ. ಯಾರೂ ಮೇಲಲ್ಲ, ಕೀಳಲ್ಲ. ಎಲ್ಲರೂ ಒಂದೇ ಎಂದು ಶಿವಣ್ಣ ಹೇಳಿದರು.



