ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ್ದನ್ನು ಸಹಿಸದ 52 ವರ್ಷದ ವ್ಯಕ್ತಿಯೊಬ್ಬ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ 26 ವರ್ಷದ ಗೆಳತಿಯನ್ನು ದಾರಿ ಮಧ್ಯದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಕೊಲೆಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವನಜಾಕ್ಷಿ ಎಂಬಾಕೆಯನ್ನು ಕೊಲೆಗೈದ ಕ್ಯಾಬ್ ಚಾಲಕ ವಿಠಲನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದಲ್ಲಿ, ಗಂಡನನ್ನು ಕಳೆದುಕೊಂಡಿದ್ದ ವನಜಾಕ್ಷಿ ಮತ್ತು ವಿಠಲ ಒಟ್ಟಿಗೆ ಜೀವಿಸುತ್ತಿದ್ದರು.
ಆರೋಪಿ ವಿಠ್ಠಲನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮೃತಪಟ್ಟಿದ್ದು, ಎರಡನೇ ಪತ್ನಿ ಬೇರೊಬ್ಬರ ಜೊತೆ ಪರಾರಿ ಯಾಗಿದ್ದಳು.
ವಿಠಲ ಮತ್ತು ವನಜಾಕ್ಷಿ ಮೂರ್ನಾಲ್ಕು ವರ್ಷಗಳಿಂದ ಲಿವ್‌ಇನ್ ಟುಗೆದರ್‌ನಲ್ಲಿದ್ದರು. ವನಜಾಕ್ಷಿ ಇತ್ತೀಚಿಗೆ ವಿಠ್ಠಲನ ಅವಾಯ್ಡ್ ಮಾಡಲು ಶುರು ಮಾಡಿ, ಗ್ರಾಮದ ಮತ್ತೊಬ್ಬರ ಜೊತೆಗೆ ಸಲುಗೆಯಲ್ಲಿದ್ದರು. ಈ ವಿಚಾರಕ್ಕೆ ವಿಠಲ ಜಗಳವಾಡುತ್ತಿದ್ದ.
ಕಳೆದ ಶನಿವಾರ ವನಜಾಕ್ಷಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೊಸ ಸ್ನೇಹಿತನ ಜೊತೆ ಕಾರಲ್ಲಿ ತೆರಳುತ್ತಿರುವುದನ್ನು ನೋಡಿ ವಿಠಲ ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರನ್ನು ತಡೆದು ನಿಲ್ಲಿಸಿ 5 ಲೀಟರ್ ಪೆಟ್ರೋಲ್ ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ.
ವನಜಾಕ್ಷಿ ಹಾಗೂ ಆಕೆಯ ಸ್ನೇಹಿತ ಕಾರಿನಿಂದ ಇಳಿದು ಓಡಲಾರಂಭಿಸಿದ್ದಾರೆ. ಆದರೂ ಬಿಡದೆ ವಿಠಲ ಹಿಂಬಾಲಿಸಿಕೊಂಡು ಹೋಗಿ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ ನಿಂದ ಬೆಂಕಿ ಹಚ್ಚಿದ್ದ. ಶೇ.60 ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವನಜಾಕ್ಷಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹುಳಿಮಾವು ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ವಿಠ್ಠಲನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



