ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ದುರಂತದಲ್ಲಿ ಅಸ್ಸಾಂ ಮೂಲದ ಖ್ಯಾತ ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ನಾರ್ತ್ ಈಸ್ಟ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ದ್ವೀಪ ರಾಷ್ಟ್ರಕ್ಕೆ ಪ್ರಯಾಣಿಸಿದ್ದ ಅಸ್ಸಾಂನ ಪ್ರಸಿದ್ಧ ಗಾಯಕ ಜುಬೀನ್ ಗಾರ್ಗ್ ಸ್ಕೂಬಾ ಡೈವಿಂಗ್ ವೇಳೆ ಸಮುದ್ರದಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಿಂಗಾಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
“rockstar of the Northeast” ಎಂದೇ ಖ್ಯಾತಿಗೆ ಪಾತ್ರರಾಗಿದ್ದ ಜುಬೀನ್ ಗಾರ್ಗ್, 3 ದಶಕಗಳಿಗೂ ಹೆಚ್ಚು ಕಾಲದಿಂದ ಅಸ್ಸಾಂ ಹಾಗೂ ಭಾರತೀಯ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುವ ಮೂಲಕ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಸೂಪರ್ ಹಿಟ್ ಗ್ಯಾಂಗ್‌ಸ್ಟರ್ (2006) ಚಿತ್ರದ ‘ಯಾ ಆಲಿ’ ಹಾಡಿನೊಂದಿಗೆ ದೇಶಾದ್ಯಂತ ಮನೆಮಾತನಾಗಿದ್ದ ಜುಬೀನ್ ಗರ್ಗ, ಗಾಯಕ, ಸಂಯೋಜಕ ಮತ್ತು ನಟರಾಗಿ ವಿವಿಧ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದಾರೆ.
ಗಾಯನದ ಹೊರತಾಗಿ ಅವರು ಅಸ್ಸಾಮಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಗಾಗಿ ಸಂಗೀತ ಸಂಯೋಜಿಸಿದ್ದಾರೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಸಕ್ರಿಯವಾಗಿ ಬೆಂಬಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಸ್ಸಾಮಿ ಚಲನಚಿತ್ರಗಳನ್ನು ಪ್ರಚಾರ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಮುಂಬರುವ ಚಲನಚಿತ್ರ ರೋಯಿ ರೋಯಿ ಬಿನಾಲೆ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ.
ಈಶಾನ್ಯದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ, ಜುಬೀನ್ ಗಾರ್ಗ್ ಕೇವಲ ಕಲಾವಿದರಲ್ಲ. ಬದಲಾಗಿ ಒಂದು ಭಾವನೆ – ಹೆಮ್ಮೆ ಮತ್ತು ಗುರುತಿನ ಶಾಶ್ವತ ಸಂಕೇತ. ಸದ್ಯ ಗಾಯಕನ ನಿಧನಕ್ಕೆ ಸಂತಾಪ ವ್ಯಕ್ತವಾಗುತ್ತಿದೆ.



