ಶೆಫಾಲಿ ವರ್ಮಾ ಮತ್ತು ದೀಪ್ತಿ ಶರ್ಮ ಅವರ ಅಮೋಘ ಆಲ್ ರೌಂಡರ್ ಪ್ರದರ್ಶನದ ನೆರವಿನಿಂದ ಭಾರತ ವನಿತೆಯರ ತಂಡ 52 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಮೊದಲ ಬಾರಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
ನವೀ ಮುಂಬೈನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ಗಳಲ್ಲಿ 246 ರನ್ ಗೆ ಆಲೌಟಾಯಿತು
ಎರಡು ಬಾರಿ ಫೈನಲ್ ತಲುಪಿದ್ದ ಭಾರತ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು. ಆದರೆ ಈ ಬಾರಿ ತವರಿನ ಅಂಗಳದಲ್ಲಿ ಫೈನಲ್ ತಲುಪಿದ್ದೂ ಅಲ್ಲದೇ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು. ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡೆಯಿತು.
2017ರ ನಂತರ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸಿಕ್ಕ ಅವಕಾಶ ಕೈ ತುಂಬಾ ಬಾಚಿಕೊಂಡು ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.
ಆರಂಭಿಕ ಆಟಗಾರ್ತಿ ಲೌರಾ ವಾಲ್ವೊರ್ಟ್ ಹೋರಾಟದ ಶತಕ ವ್ಯರ್ಥವಾಯಿತು. ಲೌರಾ 98 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಅವರಿಗೆ ಮತ್ತೊಂದು ತುದಿಯಿಂದ ಉತ್ತಮ ಜೊತೆಯಾಟ ಸಿಗಲಿಲ್ಲ.
ಲೌರಾ ಮತ್ತು ಟಾಜ್ಮಿನ್ ಬ್ರಿಟ್ಸ್ (23) ಮೊದಲ ವಿಕೆಟ್ ಗೆ 51 ರನ್ ಜೊತೆಯಾಟದಿಂದ ತಂಡಕ್ಕೆ ಉತ್ತಮ ಆರಂಭ ನೀಡಿದರು. ಸುನೆ ಲುಸ್ (25) ಜೊತೆ ಲೌರಾ ಮೂರನೇ ವಿಕೆಟ್ ಗೆ 52 ರನ್ ಜೊತೆಯಾಟ ನಿಭಾಯಿಸಿದರು. ನಂತರ ಲೌರಾ ಮತ್ತು ಅನ್ನೇರಿ ಡ್ರೆಕ್ಸನ್ (35) 6ನೇ ವಿಕೆಟ್ ಗೆ 61 ರನ್ ಜೊತೆಯಾಟ ನಿಭಾಯಿಸಿದರು. ಲೌರಾ ಔಟಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಗೆಲುವಿನ ಆಸೆ ಕಮರಿತು.
ಭಾರತದ ಪರ ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಆಧರಿಸಿದ್ದ ಶೆಫಾಲಿ ವರ್ಮಾ 2 ವಿಕೆಟ್ ಕಿತ್ತರೆ, ದೀಪ್ತಿ ಶರ್ಮ 4 ವಿಕೆಟ್ ಪಡೆದು ಹರಿಣಗಳ ಬ್ಯಾಟಿಂಗ್ ಗೆ ಕಡಿವಾಣ ಹಾಕಿದರು,
ದಾಖಲೆ ಜೊತೆಯಾಟ
ಭಾರತ ತಂಡಕ್ಕೆ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್ ಗೆ ೧೦೪ ರನ್ ಜೊತೆಯಾಟದಿಂದ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದೂ ಅಲ್ಲದೇ ವಿಶ್ವಕಪ್ ಫೈನಲ್ ನಲ್ಲಿ ಅತೀ ದೊಡ್ಡ ಜೊತೆಯಾಟ ನಿಭಾಯಿಸಿದ ವಿಶ್ವದಾಖಲೆಗೆ ಪಾತ್ರರಾದರು.
ಸ್ಮೃತಿ ಮಂದಾನ 58 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 45 ರನ್ ಗಳಿಸಿದ್ದಾಗ ಟ್ರಿಯಾನ್ ಎಸೆತದಲ್ಲಿ ಬೌಂಡರಿ ಹೊಡೆಯುವ ಯತ್ನದಲ್ಲಿ ವಿಫಲರಾಗಿ ಅರ್ಧಶತಕದಿಂದ ವಂಚಿತರಾದರು. ಶೆಫಾಲಿ 78 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 87 ರನ್ ಗಳಿಸಿದ್ದಾಗ ಇಲ್ಲದ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲುವ ಮೂಲಕ ಶತಕ ವಂಚಿತರಾದರು.
ಸೆಮಿಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೆಮಿಹಾ ರೋಡ್ರಿಗಜ್ 37 ಎಸೆತಗಳಲ್ಲಿ 1 ಬೌಂಡರಿ ಸಹಾಯದಿಂದ 24 ರನ್ ಬಾರಿಸಿ ಔಟಾದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ (20) ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ದೀಪ್ತಿ ಶರ್ಮ 58 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 58 ರನ್ ಬಾರಿಸಿ ಔಟಾದರೆ, ರಿಚಾ ಘೋಷ್ 24 ಎಸೆತಗಳಲ್ಲಿ 3 ಬೌಂಡರಿ ಮತ್ತು ೨ ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದರು. ಇವರಿಬ್ಬರು ಆಡುತ್ತಿದ್ದಾಗ ಭಾರತ 300ರ ಗಡಿ ದಾಟುವ ಭರವಸೆ ಮೂಡಿಸಿತ್ತು. ಆದರೆ ಕೊನೆಯ ಹಂತದಲ್ಲಿ ಇವರು ಔಟಾಗಿದ್ದರಿಂದ ತಂಡ 300 ರನ್ ಪೇರಿಡುವಲ್ಲಿ ಎಡವಿತು.
ದಕ್ಷಿಣ ಆಫ್ರಿಕಾದ ಕ್ಷೇತ್ರರಕ್ಷಣೆ ಕಳಪೆಯಾಗಿದ್ದು, ನಾಲ್ಕೈದು ಕ್ಯಾಚ್ ಕೈಚೆಲ್ಲಿ ಭಾರತದ ಆಟಗಾರ್ತಿಯರಿಗೆ ಅವಕಾಶ ನೀಡಿದರು. ಅಯಬೊಂಗಾ ಖಾಕಾ 58 ರನ್ ನೀಡಿ 3 ವಿಕೆಟ್ ಪಡೆದು ಪ್ರಭಾವಿ ಆದರು.



