ಶಾಲೆಯ 4ನೇ ಮಹಡಿ ಮೇಲಿಂದ ಹಾರಿ 9 ವರ್ಷದ ಬಾಲಕಿ ಬಿದ್ದು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿಸಿಟಿವಿಯಲ್ಲಿ 48 ಅಡಿ ಎತ್ತರದಿಂದ 6ನೇ ತರಗತಿ ವಿದ್ಯಾರ್ಥಿನಿ ಬಿದ್ದಿರುವ ದೃಶ್ಯ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಬಾಲಕಿ ಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಆಡಳಿತ ಮಂಡಳಿಯ ನಡೆಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಆದರೆ ಪೊಲೀಸರು ಗೋಡೆ ಹಾಗೂ ಇನ್ನಿತರ ಜಾಗದಲ್ಲಿ ಬಿದ್ದ ರಕ್ತದ ಕಲೆಗಳ ಮಾದರಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.
ಸಿಸಿಟಿವಿಗಳ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ಬಾಲಕಿ ಕೆಳಗೆ ಜಿಗಿಯುತ್ತಿರುವ ದೃಶ್ಯ ಮಾತ್ರ ಬಹಿರಂಗಪಡಿಸಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ಹಿಂದಿನ ಕಾರಣ ಏನು ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಸಾಕ್ಷ್ಯ ನಾಶಪಡಿಸಲು ನೀರಜಾ ಮೋದಿ ಶಾಲಾ ಆಡಳಿತ ಮಂಡಳಿ ಪ್ರಯತ್ನಿಸಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಜೈಪುರ ಮಾನಸಸರೋವರ್ ನಿವಾಸಿಗಳಾದ ಮೃತ ಬಾಲಕಿಯ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಷಕರಿಗೆ ಈಕೆ ಒಬ್ಬಳೇ ಮಗಳಾಗಿದ್ದು, ಅವರ ಆಕ್ರಂದನ ಮುಗಿಲುಮುಟ್ಟಿದೆ.



