ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ಪೋಷಕ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಆವರಿಸಿಕೊಂಡಿತ್ತು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಿಗ್ಗೆ ಚಿಕಿತ್ಸೆ ನೀಡುವ ಹಂತದಲ್ಲಿ ಅಸುನೀಗಿದ್ದಾರೆ. ಅವರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಉಪೇಂದ್ರ ನಿರ್ದೇಶಿಸಿ, ಶಿವರಾಜ್ ಕುಮಾರ್ ನಟಿಸಿದ್ದ ಓಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ಹರೀಶ್ ರಾಯ್ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಭಾರೀ ಹಿಟ್ ಆದ ಕೆಜಿಎಫ್, ಕೆಜಿಎಫ್-2 ಚಿತ್ರಗಳಲ್ಲಿ ನಟಿಸಿ ಚಾಚಾ ಎಂದೇ ಖ್ಯಾತರಾಗಿದ್ದರು.



