ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿ 1.5 ಲಕ್ಷ ರೂ. ಸುಲಿಗೆ ಮಾಡಿದ್ದ ಸೈಬರ್ ವಂಚಕನನ್ನು ಬೆಂಗಳೂರು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.
ಸೆಪ್ಟೆಂಬರ್ 15ರಂದು ಉಪೇಂದ್ರ ಹಾಗೂ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿದ್ದ ಪ್ರಕರಣದಲ್ಲಿ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಪೊಲೀಸರು ಬಿಹಾರದಲ್ಲಿ ಸೈಬರ್ ವಂಚಕನ ಜಾಲ ಹಿಡಿದು ಹೋದಾಗ ಆರೋಪಿಯ 20ರಿಂದ 25 ವಯಸ್ಸಿನ 150 ಸಹಚರರು ಸೈಬರ್ ವಂಚನೆ ಜಾಲದಲ್ಲಿ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಸೆ.15ರಂದು ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಆಗಿತ್ತು. ಆನ್ಲೈನ್ನಲ್ಲಿ ಕೆಲವು ವಸ್ತುಗಳನ್ನು ಪ್ರಿಯಾಂಕಾ ಬುಕ್ ಮಾಡಿದ್ದರು. ಆಗ ಮೊಬೈಲ್ಗೆ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರಿಯಾಂಕ ಕ್ಲಿಕ್ ಮಾಡಿದ್ದರು. ಬಳಿಕ ಓಟಿಪಿ ಕೇಳಿದ ವಂಚಕ ವಾಟ್ಸಾಪ್ ಹ್ಯಾಕ್ ಮಾಡಿದ್ದ.
ಆರೋಪಿಯು ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್ನಿಂದ ಕರೆ ಮಾಡಿದ್ದರು. ಬಳಿಕ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಆಗಿತ್ತು.
ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್ನಿಂದ ಆರೋಪಿ ಹಲವರಿಗೆ ಮೆಸೇಜ್ ಮಾಡಿದ್ದು, ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್ಗೆ ಐವತ್ತು ಸಾವಿರ ಹಾಕಿದ್ದರು. ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್ಗೆ ಕರೆ ಮಾಡಿದರೆ ಕಾಲ್ ಕಟ್ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು. ಸೈಬರ್ ವಂಚಕನ ಅಕೌಂಟ್ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು.



