ಪದೇಪದೇ ಹಾರ್ನ್ ಮಾಡಿ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಟೆಕ್ಕಿ ಮೂವರು ಸಲಿಸುತ್ತಿದ್ದ ಬೈಕ್ ಗೆ ಕಾರಿನಲ್ಲಿ ಗುದ್ದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಗೆ ಯತ್ನಿಸಿದ ಸಾಫ್ಟ್ವೇರ್ ಇಂಜಿನಿಯರ್ ಸುಕೃತ್ ಕೇಶವ್ ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 26 ರಂದು ಅಪಘಾತವೆಂದು ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಬೈಕ್ ಗೆ ಗುದ್ದಿ ಪರಾರಿಯಾಗಿದ್ದು ತಿಳಿದು ಬಂದಿದೆ.
ಮಲ್ಲೇಶ್ವರ ಸಮೀಪದ ರಾಮಯ್ಯ ಸಿಗ್ನಲ್ನಲ್ಲಿ ಪತ್ನಿ ಹಾಗೂ ಮಗು ಬೈಕ್ ನಲ್ಲಿ ಹೋಗುತ್ತಿದ್ದಾಗ ೨೩ ವರ್ಷದ ಸುಕೃತ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಡಿವೈಡರ್ ಗೆ ಗುದ್ದಿ ಪಲ್ಟಿ ಆಗಿತ್ತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು.
ಈ ವೇಳೆ ಹಿಂದಿನಿಂದ ಬಂದ ಕಾರಿನ ಚಾಲಕ ಹಾರ್ನ್ ಮಾಡಿದಾಗ ಬೈಕ್ ಸವಾರ ಸಿಗ್ನಲ್ ಲೆಫ್ಟ್ ಫ್ರೀ ಟರ್ನ್ ಇಲ್ಲ ಎಂದಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಕಾರು ಚಾಲಕ ಸುಕೃತ್, ಕೋಪದಲ್ಲಿ ಉದ್ದೇಶಪೂರ್ವಕವಾಗಿ ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.
ಇತರ ವಾಹನ ಸವಾರರು ಬೈಕ್ನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮೊದಲಿಗೆ ಪೊಲೀಸರು ಇದನ್ನು ಹಿಟ್ ಅಂಡ್ ರನ್ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ತನಿಖೆ ಮುಂದುವರಿದಂತೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಪರಿಶೀಲನೆ ವೇಳೆ, ಇದು ಕೇವಲ ಅಪಘಾತವಲ್ಲದೆ, ಉದ್ದೇಶಪೂರ್ವಕವಾಗಿ ನಡೆದ ಕೊಲೆಯತ್ನ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಅತೀಯಾದ ವೇಗ ಹಾಗೂ ಅಪಾಯಕಾರಿ ಚಾಲನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ನ.7 ರಂದು ಪ್ರಕರಣವನ್ನು ಸದಾಶಿವನಗರ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗೆ ವರ್ಗಾಯಿಸಿ, ಕೊಲೆಯತ್ನ ಪ್ರಕರಣ ದಾಖಲಿಸಿ ಸಾಫ್ಟ್ವೇರ್ ಇಂಜಿನಿಯರ್ ಸುಕತ್ನನ್ನು ಬಂಧಿಸಿದ್ದಾರೆ.



