ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಚಿಕ್ಕಬಾಣಾವರ ನಿಲ್ದಾಣದ ಬಳ ಬೆಂಗಳೂರಿನ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲಕ ವಿದ್ಯಾರ್ಥಿ ಜಸ್ಟಿನ್ ಜೋಸೆಫ್ (21) ಹಾಗೂ ವಿದ್ಯಾರ್ಥಿನಿ ಸ್ಟೆರಿನ್ ಎಲ್ಜಾ ಸಜಿ (19) ರೈಲಿಗೆ ಸಿಲುಕಿ ಮೃತಪಟ್ಟಿದ್ದು,
ಬೆಂಗಳೂರು ಗ್ರಾಮಾಂತರ ರೈಲ್ವೇ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮೃತರ ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ.
ಕೇರಳದ ಪಟ್ಟನಂತಿಟ್ಟ ಮೂಲದವರಾದ ಇಬ್ಬರೂ ವಿದ್ಯಾರ್ಥಿಗಳು ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ್ದಾರೆ. ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಮೃತರಿಬ್ಬರು ಸ್ನೇಹಿತರಾಗಿದ್ದು, ರೈಲಿನ ಸಿಸಿಟಿವಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇಬ್ಬರೂ ಆತ್ಮಹತ್ಯೆಗೆ ಮಾಡಿಕೊಂಡಿರುವಂತೆ ಭಾಸವಾಗುತ್ತಿದೆ. ತನಿಖೆಯಲ್ಲಿ ಯಾವುದೇ ರೀತಿಯ ಡೆತ್ ನೋಟ್ ದೊರೆತಿಲ್ಲ. ಗ್ರಾಮಾಂತರ ರೈಲ್ವೆ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಕಾರಣದ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ರಾಜ್ಯ ರೈಲ್ವೆ ಎಸ್ಪಿ ಯತೀಶ್ ಎನ್. ತಿಳಿಸಿದ್ದಾರೆ.



