Tuesday, June 23, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಕೆಟ್ಟು ನಿಂತ ಮೆಟ್ರೋ ರೈಲು: ಪ್ರಯಾಣಿಕರ ಪರದಾಟ

ಬೆಂಗಳೂರಿನಲ್ಲಿ ಕೆಟ್ಟು ನಿಂತ ಮೆಟ್ರೋ ರೈಲು: ಪ್ರಯಾಣಿಕರ ಪರದಾಟ

ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮಾರ್ಗ ಮಧ್ಯೆದಲ್ಲೇ ಕೆಟ್ಟು ನಿಂತಿದ್ದು, ಇದರಿಂದ ಪ್ರಯಾಣಿಕರು ಪರದಾಡಿದ್ದಾರೆ.

ಸೋಮವಾರ ಸಂಜೆ ನಗರದ ಪ್ರಮುಖ ನಿಲ್ದಾಣವಾದ ಕಬ್ಬನ್ ಪಾರ್ಕ್ ಬಳಿ ಬರುತ್ತಿದ್ದಂತೆ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಮಾರ್ಗ ಮಧ್ಯದಲ್ಲೇ ನಿಂತಿದೆ. ಇದರಿಂದ ಕೆಲವು ಮೆಟ್ರೋ ರೈಲುಗಳ ಸಂಚಾರದ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

30 ನಿಮಿಷಗಳ ಕಾಲ ರೈಲಿನಲ್ಲೇ ಆತಂಕ

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ರೈಲು ಬಂದು ನಿಲ್ಲುತ್ತಿದ್ದಂತೆ ತಾಂತ್ರಿಕ ದೋಷ ಸಂಭವಿಸಿದೆ. ಇದರಿಂದಾಗಿ ರೈಲಿನ ಸ್ವಯಂಚಾಲಿತ ಬಾಗಿಲುಗಳು ತೆರೆದುಕೊಳ್ಳದೆ, ಸುಮಾರು 30 ನಿಮಿಷಗಳ ಕಾಲ ಪ್ರಯಾಣಿಕರು ರೈಲಿನ ಒಳಗಡೆಯೇ ಸಿಲುಕಿಕೊಳ್ಳುವಂತಾಯಿತು. ಅರ್ಧ ಗಂಟೆಯ ಕಾಲ ರೈಲಿನಿಂದ ಹೊರಬರಲಾರದೆ ಪ್ರಯಾಣಿಕರು ತೀವ್ರ ಆತಂಕ ಹಾಗೂ ಉಸಿರುಗಟ್ಟುವ ವಾತಾವರಣವನ್ನು ದುರಿಸಬೇಕಾಯಿತು.

ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ಲೋಕೋ ಪೈಲಟ್

ಪ್ರಯಾಣಿಕರ ಆತಂಕವನ್ನು ಗಮನಿಸಿದ ಲೋಕೋಪೈಲಟ್, ತಕ್ಷಣವೇ ತಾಂತ್ರಿಕ ದೋಷವನ್ನು ಸರಿಪಡಿಸಲು ಪ್ರಯತ್ನಿಸುವ ಜೊತೆಯಲ್ಲೇ, ಸುರಕ್ಷತೆಯ ದೃಷ್ಟಿಯಿಂದ ರೈಲಿನ ಬಾಗಿಲುಗಳನ್ನು ಮ್ಯಾನುಯಲ್ ಆಗಿ ತೆರೆದು ಪ್ರಯಾಣಿಕರು ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಲು ಅನುಕೂಲು ಮಾಡಿಕೊಟ್ಟಿದ್ದಾರೆ. ಈ ತಾಂತ್ರಿಕ ದೋಷದಿಂದಾಗಿ ನೇರಳೆ ಮಾರ್ಗದ ಇನ್ನುಳಿದ ರೈಲುಗಳ ಸಂಚಾರದಲ್ಲೂ ಕೊಂಚ ವಿಳಂಬವಾಗುವ ಸಾಧ್ಯತೆಯಿದ್ದು, ಮೆಟ್ರೋ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಿಎಂಆರ್ ಸಿಎಲ್ ಹೇಳಿದ್ದೇನು?

ಕಾರ್ಯಾಚರಣೆ ನಿಯಂತ್ರಣ ಕೇಂದ್ರ (OCC)ದಿಂದ ಪಡೆದ ಮಾಹಿತಿಯಂತೆ, ನೇರಳೆ  ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ಒಂದು ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಕಾರ್ಯಾಚರಣೆ ಹಾಗೂ ನಿರ್ವಹಣಾ ತಂಡಗಳು ತುರ್ತಾಗಿ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ , ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ಹಾಗೂ ಎಂ ಜಿ ರಸ್ತೆ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ರೈಲುಗಳು ಸಂಚರಿಸುತ್ತಿವೆ

ಸಾಮಾನ್ಯ ಸೇವೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದು ಪ್ರಯಾಣಿಕರು ಸಹಕರಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ತಾತ್ಕಾಲಿಕ ಅನಾನುಕೂಲತೆಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸುತ್ತದೆ ಎಂಬುದಾಗಿ ಬಿಎಂಆರ್ ಸಿಎಲ್ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments