Saturday, June 27, 2026
Google search engine
Homeದೇಶಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದ ನೌಕರರ ಶೇ.10ರಷ್ಟು ವೇತನ ಕಡಿತ!

ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದ ನೌಕರರ ಶೇ.10ರಷ್ಟು ವೇತನ ಕಡಿತ!

ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಸರ್ಕಾರಿ ನೌಕರರ ವೇತನದಲ್ಲಿ ಶೇ.10 ಕಡಿತ ಮಾಡುವ ಹೊಸ ಕಾನೂನು ಜಾರಿ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ವಿಕಲಚೇತನರಿಗೆ ಆಧುನಿಕ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ವಿರುದ್ಧ ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಯಸ್ಸಾದ ಕಾಲದಲ್ಲಿ ಪೋಷಕರನ್ನು ಅನಾಥರನ್ನಾಗಿ ಬಿಡುವ ನೀತಿಗೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯ ಎಂದರು.

ಕೇವಲ ಶಿಕ್ಷೆಯ ರೂಪದ ಕ್ರಮಗಳಷ್ಟೇ ಅಲ್ಲದೆ, ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಸರ್ಕಾರವು ‘ಪ್ರಾಣಮ್’ ಹೆಸರಿನ ಡೇಕೇರ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ 50 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಲ್ಲದೆ, 2026-27ರ ಬಜೆಟ್‌ನಲ್ಲಿ ಎಲ್ಲರಿಗೂ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಹೊಸ ಆರೋಗ್ಯ ನೀತಿಯನ್ನು ಪರಿಚಯಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ತೃತೀಯ ಲಿಂಗದವರಿಗೂ ರಾಜಕೀಯ ಪ್ರಾತಿನಿಧ್ಯ

ಸಾಮಾಜಿಕ ನ್ಯಾಯದ ಭಾಗವಾಗಿ ತೆಲಂಗಾಣ ಸರ್ಕಾರವು ಮತ್ತೊಂದು ಐತಿಹಾಸಿಕ ಘೋಷಣೆ ಮಾಡಿದೆ. ಮುಂದಿನ ಚುನಾವಣೆಗಳಲ್ಲಿ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ತೃತೀಯ ಲಿಂಗದ ವ್ಯಕ್ತಿಗಳನ್ನು ‘ಕೋ-ಆಪ್ಷನ್’ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗುವುದು. ಪ್ರತಿ ಪಾಲಿಕೆಯಲ್ಲಿ ತೃತೀಯ ಲಿಂಗದವರಿಗೆ ಒಂದು ಸ್ಥಾನ ಮೀಸಲಿಡುವ ಮೂಲಕ ಅವರ ಸಮಸ್ಯೆಗಳಿಗೆ ಧ್ವನಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ವಿಕಲಚೇತನರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಕೋಟಾ ನೀಡುವುದಾಗಿ ತಿಳಿಸಿದರು. ಹೊಸದಾಗಿ ಮದುವೆಯಾಗುವ ವಿಕಲಚೇತನ ದಂಪತಿಗಳಿಗೆ ಸರ್ಕಾರ 2 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದೆ. ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರ ಸಾಧನೆಯನ್ನು ಸ್ಮರಿಸಿದ ಸಿಎಂ, ಅಂಗವೈಕಲ್ಯವು ಯಶಸ್ಸಿಗೆ ಅಡ್ಡಿಯಾಗಬಾರದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments