ಗರ್ಭಿಣಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹಣವಿಲ್ಲದ ಕಾರಣ ಅಜ್ಜಿ ಮನೆಗೆ ಕನ್ನ ಹಾಕಿದ ಮೊಮ್ಮಗ 14.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶ್ರೀರಾಂಪುರದ ಓಕಳೀಪುರಂನ ಯಶವಂತ್ (21) ನನ್ನು ಬಂಧಿಸಿದ ನಂದಿನಿ ಲೇಔಟ್ ಪೊಲೀಸರು 108 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳು ಸೇರಿ 14.50 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಂಠೀರವ ನಗರದ ಜಯಮ್ಮ ಜನವರಿ1 ರಂದು ಮಧ್ಯಾಹ್ನ ಮನೆಯಲ್ಲಿ ಒಂಟಿಯಾಗಿರುವಾಗ ಮಗಳ ಮಗ (ಮೊಮ್ಮಗ)ನಾದ ಯಶವಂತ್ ಮನೆಗೆ ಬಂದಿದ್ದ. ಮೊಮ್ಮಗನನ್ನು ಮನೆಯಲ್ಲಿ ಬಿಟ್ಟು ಪೂಜೆಗೆ ಹೂ ತರೋಣವೆಂದು ಜಯಮ್ಮ ಅಂಗಡಿಗೆ ಹೋಗಿ, ಮಧ್ಯಾಹ್ನ ಮನೆಗೆ ವಾಪಸ್ ಬಂದು ನೋಡಿದಾಗ ಮೊಮ್ಮಗ ಯಶವಂತ್ ಮನೆಯಲ್ಲಿರಲಿಲ್ಲ.
ಆತನಿಗೆ ಪೋನ್ ಕರೆ ಮಾಡಿದರೆ ಸ್ವೀಚ್ ಆಫ್ ಮಾಡಿಕೊಂಡಿದ್ದು, ಜ.4 ರಂದು ರಾತ್ರಿ ಬೀರು ತೆರೆದಾಗ ಅದರಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ನಾಪತ್ತೆಯಾಗಿದ್ದವು. ಮನೆಗೆ ಬಂದಿದ್ದ ಮೊಮ್ಮಗನೇ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಅನುಮಾನ ವ್ಯಕ್ತಪಡಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಗಣಪತಿ ಆರ್.ಎಲ್, ಮೊಮ್ಮಗನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪತ್ನಿಯು ಗರ್ಭಿಣಿಯಾಗಿದ್ದು ಖರ್ಚಿಗೆ ಹಣ ಇಲ್ಲದ ಕಾರಣ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಚಿನ್ನಾಭರಣಗಳನ್ನು ಆತನ ಬಳಿಯೇ ಇಟ್ಟುಕೊಂಡಿದ್ದು ಉಳಿದ ಚಿನ್ನ ಬೆಳ್ಳಿಯ ವಸ್ತುಗಳನ್ನು ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು, ಅಂಗಡಿಯಿಂದ 108 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.



