Wednesday, June 24, 2026
Google search engine
Homeಅಪರಾಧನಡುರಸ್ತೆಯಲ್ಲಿ 2 ಮಕ್ಕಳ ತಾಯಿ ಕೊಂದ ವಿವಾಹಿತ ಪ್ರೇಮಿ: ಸ್ಥಳೀಯರಿಂದ ಗೂಸಾ!

ನಡುರಸ್ತೆಯಲ್ಲಿ 2 ಮಕ್ಕಳ ತಾಯಿ ಕೊಂದ ವಿವಾಹಿತ ಪ್ರೇಮಿ: ಸ್ಥಳೀಯರಿಂದ ಗೂಸಾ!

ಮದುವೆಗೆ ನಿರಾಕರಿಸಿದ ಎರಡು ಮಕ್ಕಳ ತಾಯಿಯನ್ನು ನಡುರಸ್ತೆಯಲ್ಲಿ ಚಾಕು ಇರಿದು ವಿವಾಹಿತ ಪ್ರೇಮಿ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರದಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕಿನ ಜಿಗ್ ಜಾಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕತ್ತಹಳ್ಳಿ ಗ್ರಾಮದ ಸುಜಾತ (27) ಕೊಲೆಯಾದ ಮಹಿಳೆ.  ಹೊಸಕೋಟೆ ಇಂಡಸ್ ಬ್ಯಾಂಕ್‍ನ ಉದ್ಯೋಗಿ ಚಿರಂಜೀವಿ ಕೊಲೆ ಮಾಡಿದ್ದಾನೆ.

ನರಸಾಪುರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತ, ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದಳು. ಕತ್ತಿಹಳ್ಳಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದ ಕಡೆ ಕೆಲಸಕ್ಕೆ ಹೊರಟಿದ್ದ ಮಹಿಳೆಯನ್ನು ಕೋಲಾರದ ಬಳಿ ಆರೋಪಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಆರೋಪಿ ಚಿರಂಜೀವಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವಾಗ ಹಣ ವಸೂಲಿಗೆ ಹೋಗುತ್ತಿದ್ದಾಗ ಮಹಿಳೆಗೆ ಪರಿಚಯವಾಗಿದ್ದ. ಇಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸುಜಾತ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದಳು.

ಕಳೆದ ಕೆಲವು ದಿನಗಳಿಂದ ಚಿರಂಜೀವಿ ಸುಜಾತಾಳನ್ನ ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೆ ಸುಜಾತ ಒಪ್ಪಿರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸುಜಾತ ಮೇಲೆ ಆರೋಪಿ ಹಲ್ಲೆ ಮಾಡಿದ್ದ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ರಾತ್ರಿ ಸಹ ಸುಜಾತಳ ಗ್ರಾಮಕ್ಕೆ ತೆರಳಿ ಮನೆ ಬಳಿ ಆರೋಪಿ ಹೋಗಿದ್ದ. ಈ ವೇಳೆ ಸುಜಾತ ಈತನನ್ನ ನಿರ್ಲಕ್ಷಿಸಿದ್ದಳು. ಕೋಪಗೊಂಡ ಪಾಗಲ್ ಪ್ರೇಮಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ.

ಆರೋಪಿ ಚಿರಂಜೀವಿ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಆದರೂ ಕ್ರಮ ಕೈಗೊಳ್ಳಲಿಲ್ಲ, ಈಗ ನನ್ನ ಮಗಳನ್ನು ಕೊಲೆ ಮಾಡಿಬಿಟ್ಟ, ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ನನ್ನ ಮಗಳು ಬದುಕಿರುತಿದ್ದಳು ಎಂದ ಸುಜಾತ ತಂದೆ ಕಣ್ಣೀರಿಟ್ಟಿದ್ದಾರೆ. ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅರೋಪಿಯನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments