ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ 5ನೇ ದಿನವೂ ಮುಂದುವರಿದಿದ್ದು, ಮನೆಯೊಳಗೆ ಇದ್ದ ಚಾಲುಕ್ಯರ ಕಾಲದ ಪುರಾತನ ಕಾಲದ ಶಿವನ ದೇವಸ್ಥಾನ ಪತ್ತೆಯಾಗಿದೆ.
ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತಿರುವ ಚೌಕಿಮಠ ಮನೆಯ ಸಂಕೀರ್ಣದ ಒಳಭಾಗದಲ್ಲಿ ಚಾಲುಕ್ಯರ ಕಾಲದ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನ ಕಂಡುಬಂದಿದೆ.
ಚೌಕಿಮಠ ಮನೆತನದ ಆವರಣದಲ್ಲಿ ಸುಮಾರು ಹತ್ತಡಿ ಮುಚ್ಚಿ ಹೋಗಿರುವ ಪುರಾತನ ದೇವಸ್ಥಾನ ಇತಿಹಾಸಕಾರರ ಕುತೂಹಲ ಕೆರಳಿಸಿದೆ. ಇದು ಚಾಲುಕ್ಯರ ಕಾಲದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನೆಯೊಳಗೆ ಹುದುಗಿರುವ ಈ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಚೌಕಿಮಠ ಕುಟುಂಬದ ಸದಸ್ಯ ಶೇಖರಯ್ಯ ಚೌಕಿಮಠ, “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ದೇವಸ್ಥಾನವನ್ನು ಬಿಟ್ಟುಕೊಡಲು ನಾವು ಸಿದ್ಧ ಎಂದರು.
ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಸೇರಿದಂತೆ ಹಲವು ಕುಟುಂಬಗಳು ವಾಸವಿದ್ದು, ಎಲ್ಲರೂ ಬಡ ವರ್ಗಕ್ಕೆ ಸೇರಿದವರು. ಜೀವನೋಪಾಯಕ್ಕಾಗಿ ಹೋರಾಡುತ್ತಿರುವ ಈ ಕುಟುಂಬಗಳು, ಸರ್ಕಾರದಿಂದ ನ್ಯಾಯಸಮ್ಮತ ಪರಿಹಾರ ದೊರೆತಲ್ಲಿ ಸ್ಥಳವನ್ನು ತೆರವುಗೊಳಿಸಲು ಸಮ್ಮತಿಸಿದ್ದಾರೆ.
ಐತಿಹಾಸಿಕ ಮಹತ್ವ ಹೊಂದಿರುವ ದೇವಸ್ಥಾನ ಉಳಿಯಬೇಕಾದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬರುತ್ತಿದೆ. ಲಕ್ಕುಂಡಿಯ ಪುರಾತನ ವೈಭವವನ್ನು ಮತ್ತೆ ಬೆಳಕಿಗೆ ತರಲು ಇದು ಒಂದು ಅಪೂರ್ವ ಅವಕಾಶವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಲ್ಲಿನ ಕೊಡಲಿ, ನಾಗರಹಾವಿನ ಕಲ್ಲು, ಲಿಂಗ ಪತ್ತೆ!
ನಾಲ್ಕನೇ ದಿನದ ಉತ್ಖನನದಲ್ಲಿ ಎರಡು ಪುರಾತನ ಅವಶೇಷಗಳು ಪತ್ತೆಯಾಗಿದ್ದವು. ಒಂದು ಕಲ್ಲಿನ ಕೊಡಲಿ ಹಾಗೂ ಇನ್ನೊಂದು ಕಟ್ಟಡದ ಮೇಲ್ಛಾವಣಿಗೆ ಬಳಸುವ ಕಲ್ಲಿನ ಬೋದಿ ಪತ್ತೆಯಾಗಿತ್ತು.
ಮೊನ್ನೆ ನಡೆದ ಉತ್ಖನನದಲ್ಲಿ ಕಲ್ಲಿನ ಗಂಟೆ, ನಾಗರಹಾವಿನ ಕಲ್ಲು ಹಾಗೂ ಈಶ್ವರ ಲಿಂಗ ಸಿಕ್ಕಿತ್ತು. ಎರಡನೇ ದಿನ ಮಡಿಕೆ ಹಾಗೂ ಶಿವಲಿಂಗದಾಕೃತಿಯ ಕಲ್ಲುಗಳು ದೊರೆತಿದ್ದವು. ಉತ್ಖನನ ಕಾರ್ಯವನ್ನು ಐದನೇ ದಿನಕ್ಕೂ ಮುಂದುವರಿಸಲು ತೀರ್ಮಾನಿಸಲಾಗಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಪುರಾತನ ಅವಶೇಷಗಳು ಪತ್ತೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ವಿರೋಧ ಮತ್ತು ನಿರ್ಬಂಧಗಳು: ಉತ್ಖನನಕ್ಕೆ ವೀರಭದ್ರೇಶ್ವರ ದೇವಸ್ಥಾನ ಜಾತ್ರಾ ಕಮಿಟಿ ಹಾಗೂ ಗ್ರಾಮಸ್ಥರಿಂದ ಇತ್ತೀಚಿಗೆ ವಿರೋಧ ವ್ಯಕ್ತವಾಗಿತ್ತು. ಮುಂದಿನ ತಿಂಗಳು ನಡೆಯಲಿರುವ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ, ಉತ್ಖನನ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಿರುವುದರಿಂದ ಜಾತ್ರೆ ನಡೆಸುವುದು ಹೇಗೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದರು.



