ಬೆಂಗಳೂರು: ಸೈಬರ್ ವಂಚಕರ ಪಾಲಾಗಿದ್ದ 2.16 ಕೋಟಿ ರೂ. ಹಣವನ್ನು ಸೈಬರ್ ಕ್ರೈಂ ಪೊಲೀಸರು ಸಂಪೂರ್ಣವಾಗಿ ವಾಪಸ್ ಪಡೆದು ವಾರಸುದಾರರಿಗೆ ಹಿಂದಿರುಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗೋಲ್ಡನ್ ಅವರ್‌ನಲ್ಲಿ ತ್ವರಿತ ಕಾರ್ಯಾಚರಣೆ ಕೈಗೊಂಡು ಹಣ ಹಿಂಪಡೆಯಲಾಗಿದ್ದು, ದೇಶದಲ್ಲೇ ಗರಿಷ್ಠ ಮೊತ್ತದ ರಿಕವರಿ ಮಾಡಿದ ಹೆಗ್ಗಳಿಕೆಗೆ ಬೆಂಗಳೂರು ಪೊಲೀಸರು ಪಾತ್ರರಾಗಿದ್ದಾರೆ.
ಗ್ರೂಪ್ ಫಾರ್ಮಾ ಹೆಸರಿನ ಕಂಪನಿಯೊಂದು ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿಯಾದ ರೆಡ್ಡೀಸ್ ಲ್ಯಾಬೋರೇಟರೀಸ್ ಜತೆ ವ್ಯವಹಾರ ಹೊಂದಿತ್ತು.
ಜೀರಿಯಾದಲ್ಲಿ ಕುಳಿತು ಕಳೆದ ವರ್ಷ ಫೆಬ್ರವರಿಯಲ್ಲಿ ಗ್ರೂಪ್ ಫಾರ್ಮಾ ಕಂಪನಿಯ ಹೆಸರಿನಲ್ಲಿ ನಕಲಿ ಮೇಲ್ ಖಾತೆ ತೆರೆದಿದ್ದ ವಂಚಕರು, ರೆಡ್ಡೀಸ್ ಲ್ಯಾಬೋರೇಟರೀಸ್ ಜತೆ ಸಂಪರ್ಕ ಸಾಧಿಸಿದ್ದರು. ಅಸಲಿ ಮೇಲ್ ಐಡಿಯಿಂದ ಬಂದಿರಬಹುದು ಎಂದು ನಂಬಿದ್ದ ರೆಡ್ಡೀಸ್ ಲ್ಯಾಬೋರೇಟರೀಸ್, ವಂಚಕರು ಸೂಚಿಸಿದ್ದ ಖಾತೆಗೆ 2.16 ಕೋಟಿ ರೂಪಾಯಿ ಪಾವತಿಸಿದ್ದರು. ಆದರೆ ಆ ಹಣ ನಕಲಿ ಬ್ಯಾಂಕ್ ಖಾತೆಗೆ ಜಮೆಯಾಗಿರುವುದು ನಂತರ ಬಯಲಾಗಿತ್ತು.
ತಕ್ಷಣ ಗೋಲ್ಡನ್ ಅವರ್ ಅವಧಿಯೊಳಗೆ ಗ್ರೂಪ್ ಫಾರ್ಮಾದ ಪ್ರತಿನಿಧಿಗಳು ಸಿಸಿಬಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಹಣ ಸಂದಾಯವಾಗಿದ್ದ ಗುಜರಾತ್ ಮೂಲದ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಸದ್ಯ ಸಂಪೂರ್ಣವಾಗಿ 2.16 ಕೋಟಿ ರೂ. ವಾಪಸ್ ಹಿಂದಿರುಗಿಸಲಾಯಿತು ಎಂದು ಪೊಲೀಸರು ವಿವರ ನೀಡಿದ್ದಾರೆ.
1 ಗಂಟೆಯ ಗೋಲ್ಡನ್ ಅವರ್ ಮಹತ್ವ
ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಎಂಎಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಅಂಥ ಸಂದರ್ಭಗಳಲ್ಲಿ ವಂಚನೆಗೊಳಗಾದ ನಂತರದ ಒಂದು ಗಂಟೆಯ ಅವಧಿಯನ್ನು ‘ಗೋಲ್ಡನ್ ಅವರ್’ ಎನ್ನಲಾಗುತ್ತದೆ.
ಗೋಲ್ಡನ್ ಅವರ್ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಅಥವಾ ಪೊಲೀಸ್ ಠಾಣೆಗೆ ದೂರು ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್ ಪತ್ತೆ ಹಚ್ಚಿ ಅದರಲ್ಲಿರುವ ಹಣವನ್ನು ತಡೆಹಿಡಿಯುವ (Freeze) ಅವಕಾಶ ಹೆಚ್ಚಿರುತ್ತದೆ. ಮತ್ತು ತನಿಖಾ ಸಂಸ್ಥೆಗಳು ತ್ವರಿತವಾಗಿ ವಂಚಕರ ಖಾತೆಯನ್ನು ಪತ್ತೆ ಹಚ್ಚಿ, ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ.



