ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವರ್ ಸೇರಿದಂತೆ 5 ಮಂದಿ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಸುನೀಗಿದ್ದಾರೆ.
ಮುಂಬೈನಿಂದ ಬುಧವಾರ ಬೆಳಿಗ್ಗೆ 8.10 ನಿಮಿಷಕ್ಕೆ ಹೊರಟ ಮಿನಿ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪತನಗೊಂಡಿದೆ. ದುರಂತದಲ್ಲಿ ಎನ್ ಸಿಪಿ ಮುಖಂಡ ಹಾಗೂ ಡಿಸಿಎಂ ಅಜಿತ್ ಪವಾರ್, ಪೈಲೆಟ್ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶದಿಂದ ಅಜಿತ್ ಪವಾರ್ ಬಾರಾಮತಿಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಪತನಗೊಂಡ ವಿಮಾನ ತುಂಡು ತುಂಡಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕದ ಸಿಬ್ಬಂದಿ ದೌಡಾಯಿಸಿದೆ. ಆದರೆ ವಿಮಾನ ಪತನಗೊಂಡ ಹೊಡೆತಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ 5 ಮಂದಿ ಸಜೀವದಹನಗೊಂಡಿದ್ದಾರೆ.
ಎನ್ ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಸೋದರ ಅಜಿತ್ ಪವಾರ್ ಪಕ್ಷವನ್ನು ಇಬ್ಭಾಗ ಮಾಡಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರದ ಭಾಗಿಯಾಗಿದ್ದರು. ಅಜಿತ್ ಪವಾರ್ ನಾಲ್ಕು ಮುಖ್ಯಮಂತ್ರಿಗಳ ಜೊತೆ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಪೃಥ್ವಿರಾಜ್ ಚೌಹಾಣ್, ಏಕನಾಥ್ ಶಿಂಧೆ, ಉದ್ದವ್ ಠಾಕ್ರೆ ಮತ್ತು ದೇವೇಂದ್ರ ಫಡ್ನವೀಸ್ ಅವರ ಆಡಳಿತದಲ್ಲಿ ಅಜಿತ್ ಡಿಸಿಎಂ ಆಗಿದ್ದು, ಸಿಎಂ ಆಗುವ ಅವರ ಕನಸು ಕೊನೆಗೂ ಈಡೇರಲೇ ಇಲ್ಲ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ವಿಎಸ್ಆರ್ ಏವಿಯೇಷನ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ಲಿಯರ್‌ಜೆಟ್ – 45 ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಐದು ಜನರಿದ್ದರು ಎಂದು ಅಧಿಕಾರಿ ದೃಢಪಡಿಸಿದರು.
“ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಇಬ್ಬರು ಸಿಬ್ಬಂದಿ (1 ಪಿಎಸ್‌ಒ ಮತ್ತು 1 ಅಟೆಂಡೆಂಟ್) ಮತ್ತಿಬ್ಬರು ಸಿಬ್ಬಂದಿ (ಪಿಐಸಿ+ಎಫ್‌ಒ) ಸದಸ್ಯರು ಇದ್ದರು. ಆರಂಭಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಯಾರೂ ಅಪಘಾತದಲ್ಲಿ ಬದುಕುಳಿದಿಲ್ಲ” ಎಂದು ಡಿಜಿಸಿಎ ಅಧಿಕಾರಿ ಮಾಹಿತಿ ನೀಡಿದ್ದಾರೆ.



