Saturday, June 27, 2026
Google search engine
Homeದೇಶಮೇ 15ರಿಂದ ಪ್ರಧಾನಿ ಮೋದಿ 6 ದಿನ ವಿದೇಶ ಪ್ರವಾಸ

ಮೇ 15ರಿಂದ ಪ್ರಧಾನಿ ಮೋದಿ 6 ದಿನ ವಿದೇಶ ಪ್ರವಾಸ

ನವದೆಹಲಿ: ಜಾಗತಿಕ ಭೌಗೋಳಿಕ, ರಾಜಕೀಯ ಏರಿಳಿತಗಳ ನಡುವೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮೇ 15ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ 6 ದಿನಗಳ ಸುದೀರ್ಘ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರಧಾನಿ ಅವರ ಮೊದಲ ಭೇಟಿ ಯುಎಇ ಆಗಿರಲಿದ್ದು, ಅಲ್ಲಿ ಅವರು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಜತೆ ಮಾಡುಕತೆ ನಡೆಸಲಿದ್ದಾರೆ. ಈ ಭೇಟಿಯಲ್ಲಿ ಇಂಧನ ಸಹಕಾರ, ವ್ಯಾಪಾರ ಮತ್ತು ಹೂಡಿಕೆಗಳ ಬಗ್ಗೆ ಚರ್ಚಿಸುವುದರ ಜತೆಗೆ, ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಸಂಘರ್ಷದ ಬಗ್ಗೆಯೂ ವಿಚಾರ ವಿನಿಮಯ ನಡೆಸಲಿದ್ದಾರೆ.

ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಅಲ್ಲಿನ 4.5 ಮಿಲಿಯನ್ ಭಾರತೀಯ ಸಮುದಾಯದ ಕಲ್ಯಾಣದ ಬಗ್ಗೆಯೂ ಮಾತುಕತೆ ನಡೆಯಲಿದೆ.

ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್ ಪ್ರವಾಸ

ಮೇ 17ರವರೆಗೆ ಪ್ರಧಾನಿ ನೆದರ್ಲ್ಯಾಂಡ್ಸ್‌ನಲ್ಲಿ ಇರಲಿದ್ದಾರೆ. ಅಲ್ಲಿ ಅವರು ರಾಜ ವಿಲ್ಲೆಮ್-ಅಲೆಕ್ಸಾಂಡ‌ರ್ ಮತ್ತು ಪ್ರಧಾನಿ ರಾಬ್ ಜೆಟೆನ್ ಅವರೊಂದಿಗೆ ರಕ್ಷಣೆ, ಹಸಿರು ಹೈಟ್ರೋಜನ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿನ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಚರ್ಚಿಸಲಿದ್ದಾರೆ. ನಂತರ ಮೇ 17-18ರಂದು ಸ್ವೀಡನ್‌ಗೆ ಭೇಟಿ ನೀಡಲಿರುವ ಮೋದಿ, ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ ಎಐ, ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆಯ ಕುರಿತು ಮಾತುಕತೆ ನಡೆಸಲಿದ್ದಾರೆ.

ನಾರ್ವೆ ಮತ್ತು ಭಾರತ-ನಾರ್ಡಿಕ್ ಶೃಂಗಸಭೆ

ಮೇ 18-19ರಂದು ಮೋದಿ ನಾರ್ವೆಗೆ ಭೇಟಿ ನೀಡಲಿದ್ದಾರೆ. ಇದು 43 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರ ಮೊದಲ ನಾರ್ವೆ ಭೇಟಿಯಾಗಿದೆ. ಓಲ್ಲೋದಲ್ಲಿ ನಡೆಯಲಿರುವ ಮೂರನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಸಭೆಯು ನಾರ್ಡಿಕ್ ದೇಶಗಳೊಂದಿಗೆ ತಂತ್ರಜ್ಞಾನ, ಸುಸ್ಥಿರತೆ ಮತ್ತು ಬ್ಲೂ ಎಕಾನಮಿ (ಸಮುದ್ರ ಆಧಾರಿತ ಆರ್ಥಿಕತೆ) ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಗುರಿ ಹೊಂದಿದೆ.

ಅಂತಿಮ ಹಂತ ಇಟಲಿ ಭೇಟಿ:

ಪ್ರವಾಸದ ಕೊನೆಯ ಹಂತದಲ್ಲಿ ಮೇ 19-20ರಂದು ಪ್ರಧಾನಿ ಇಟಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ರಕ್ಷಣೆ, ಭದ್ರತೆ ಮತ್ತು ಇಂಧನ ವಲಯದ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029ರ ಅನುಷ್ಠಾನದ ಬಗ್ಗೆ ಅವರು ಚರ್ಚಿಸಲಿದ್ದಾರೆ. ಈ ಒಟ್ಟಾರೆ ಪ್ರವಾಸವು ಯುರೋಪ್ ಮತ್ತು ಯುಎಇ ಜತೆಗಿನ ಭಾರತದ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments