Monday, June 8, 2026
Google search engine
Homeರಾಜಕೀಯನಿಮ್ಮ ವೈಫಲ್ಯ ಕಾಂಗ್ರೆಸ್ ಮೇಲೆ ಯಾಕೆ ಹಾಕುತ್ತೀರಿ: ಪ್ರಧಾನಿಗೆ ಸಿದ್ದು ಗುದ್ದು

ನಿಮ್ಮ ವೈಫಲ್ಯ ಕಾಂಗ್ರೆಸ್ ಮೇಲೆ ಯಾಕೆ ಹಾಕುತ್ತೀರಿ: ಪ್ರಧಾನಿಗೆ ಸಿದ್ದು ಗುದ್ದು

ಬೆಂಗಳೂರು: ನಿಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳಲು ಆಗದ ನೀವು ಕಾಂಗ್ರೆಸ್ ಪಕ್ಷದ ಮೇಲೆ ಯಾಕೆ ಆರೋಪ ಮಾಡುತ್ತೀರಿ. ನಿಮ್ಮ ಎಲೆಯಲ್ಲಿ ಬಿದ್ದಿರುವ ಆನೆ ಬಗ್ಗೆ ಯೋಚಿಸುವುದು ಬಿಟ್ಟು ಬೇರೆಯವರ ಎಲೆಯಲ್ಲಿ ಇರುವ ನೋಣದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳವೇ ತುಂಬಿಹೋಗಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

‘ಪ್ರಧಾನಿ ಮೋದಿ ಅವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ?, ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ?, ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ ಇತ್ತು. ತನ್ನ ಎಲೆ ಮೇಲೆ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆ ಮೇಲೆ ಸತ್ತುಬಿದ್ದ ನೊಣವನ್ನು ಹುಡುಕಾಡುವ ಥೋಂಗಿ ಬುದ್ದಿಯೂ ಅವರ ಭಾಷಣದಲ್ಲಿ ಇತ್ತು’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರೂ ಸೇರಿದಂತೆ ದೇಶದ ಪ್ರಧಾನಮಂತ್ರಿಯಾದವರು ಎಂದೂ ಕೆಟ್ಟ ರಾಜಕಾರಣಿಗಳ ರೀತಿ ಬೀದಿ ಭಾಷಣ ಮಾಡಿ ವಿರೋಧ ಪಕ್ಷಗಳನ್ನು ಹಳಿಯಲು ಹೋಗಿಲ್ಲ. ಅವರೆಲ್ಲರೂ ಕಾಪಾಡಿಕೊಂಡು ಬಂದಿದ್ದ ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಾಸೂಯೆಗಳನ್ನು ವ್ಯಕ್ತಪಡಿಸುವ ಭಾಷಣಗಳ ಮೂಲಕ ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಮೋದಿಯವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ರ್ಕ್ಯಾಲಿಗಳ ಗುಂಗಿನಲ್ಲಿಯೇ ಇದ್ದಂತೆ ಕಂಡರು’ ಎಂದು ಅವರು ಕುಟುಕಿದ್ದಾರೆ.

*2024-25ರಲ್ಲಿಯೇ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದ, ಭಾರತದ ಅಭಿವೃದ್ಧಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದ ಮತ್ತು ದೇಶದ ಬಡತನವನ್ನು ನಿರ್ಮೂಲನೆ ಮಾಡಿ ಆಗಿದೆ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದ್ದ ಮೋದಿ ಅವರು ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮತ್ತು ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಮಾಡಬೇಡಿ ಮತ್ತು ಗೊಬ್ಬರ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ ಎನ್ನುವುದನ್ನು ಅವರೇ (ಮೋದಿ) ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ಅರಿತುಕೊಳ್ಳುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ಭಾರತ ಇಂದಿನ ದುಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮೋದಿಯವರೇ, ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರೂ ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ’ ಎಂದು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾ ಆದಾಯ ₹2.11 ಲಕ್ಷ ಆಗಿದ್ದರೆ ಕರ್ನಾಟಕದ್ದು ₹4.33 ಲಕ್ಷ. ದೇಶದ ಜಿಡಿಪಿ ಬೆಳವಣಿಗೆಯ ದರ ಶೇಕಡ 7.4 ಆಗಿದ್ದರೆ, ಕರ್ನಾಟಕದ್ದು ಶೇಕಡ 8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇಕಡ 9.19 ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು’ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಅವರೇ, ಕರ್ನಾಟಕವು ಅಭಿವೃದ್ಧಿಯ ಪಥದಲ್ಲಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು?

ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯವರ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ’ ಎಂದು ಕುಟುಕಿದ್ದಾರೆ.

‘ಮೋದಿಯವರು ತಮ್ಮ ಪಕ್ಷದ ವಿಶ್ವಾಸದ್ರೋಹದ ಚರಿತ್ರೆಯನ್ನು ಒಮ್ಮೆ ನೆನಪುಮಾಡಿಕೊಂಡಿದ್ದರೆ ಅವರು ಖಂಡಿತ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸದ್ರೋಹದ ಆರೋಪವನ್ನು ಮಾಡುತ್ತಿರಲಿಲ್ಲ. ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಡಿಎಂಕೆ, ಪಿಡಿಪಿ, ಶಿವಸೇನಾ, ಅಕಾಲಿದಳ, ನ್ಯಾಷನಲ್ ಕಾನ್ಸರೆನ್ಸ್ ಸೇರಿದಂತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ವಿಶ್ವಾಸದ್ರೋಹಕ್ಕೊಳಗಾದ ಪ್ರಾದೇಶಿಕ ಪಕ್ಷಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಬ್ಲಾಕ್‌ಮೇಲ್ ಮಾಡಿ ಅವರು ತಮ್ಮ ಪಕ್ಷಗಳಿಗೆ ವಿಶ್ವಾಸದ್ರೋಹ ಎಸಗುವಂತೆ ಮಾಡಿ, ಜೊತೆಯಲ್ಲಿ ಸೇರಿಸಿಕೊಂಡ ವಿರೋಧ ಪಕ್ಷದ ನಾಯಕರ ಪಟ್ಟಿಯೂ ಬೆಳೆಯುತ್ತಿದೆ. ಇಂತಹ ವಿಶ್ವಾಸದ್ರೋಹಿ ಪಕ್ಷದ ನಾಯಕರಾದ ಮೋದಿವಯರು ಕಾಂಗ್ರೆಸ್ ಪಕ್ಷದ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿರುವುದನ್ನು ನೋಡಿ ದೇಶದ ಜನರೇ ಅಪಹಾಸ್ಯ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಕರ್ನಾಟಕದ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿ ಕೂಡಿ ಹಾಕಿರುವ ಏಡಿಗಳಂತಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡು ರಾಜಕೀಯ ಹರಾಕಿರಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಎದುರಾಗಿ ಪಕ್ಷದೊಳಗೆ ಅರ್ಧ ಡಜನ್ ಗುಂಪುಗಳಿವೆ. ಈ ಗುಂಪುಗಳ ನಾಯಕರು ಯಡಿಯೂರಪ್ಪ ವಿರುದ್ಧ ನೂರಾರು ಆರೋಪಗಳನ್ನು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಧೈರ್ಯ 56 ಇಂಚಿನ ಹಿಂದೆಯಳತೆಯ ನಾಯಕರಲ್ಲಿ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ’ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

‘ಪಕ್ಷವೇ ಅಮಾನತುಗೊಳಿಸಿದ್ದ ನಾಯಕರ ಕಾಲಿಗೆ ಬಿದ್ದು ಕರೆತಂದು ಚುನಾವಣಾ ಪ್ರಚಾರ ಮಾಡುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿಯ ಸ್ಥಿತಿ ಕೆಟ್ಟುಹೋಗಿದೆ. ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಲು ಹೊರಟಿದ್ದಾರೆ. ಪ್ರಧಾನಿಯವರೇ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ’ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments