Saturday, June 13, 2026
Google search engine
Homeಬೆಂಗಳೂರುಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಪೂರ್ಣ: ಡಿಕೆ ಶಿವಕುಮಾರ್

ಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಪೂರ್ಣ: ಡಿಕೆ ಶಿವಕುಮಾರ್

ಬೆಂಗಳೂರು: ಮುಂದಿನ ಒಂದೂವರೆ ವರ್ಷದಲ್ಲಿ ಮೊದಲ ಹಂತದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬಿಡಿಎ ಅಧಿಕಾರಿಗಳ ಜತೆ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಉತ್ತರ ಹಾಗೂ ದಕ್ಷಿಣ) ಬಗ್ಗೆ ಪರಿಶೀಲನೆ ಸಭೆ ನಡೆಸಿದೆ. ಇಂದು ಭೂಮಿ ಮಾಲೀಕರಿಗೆ ಪರಿಹಾರದ ಚೆಕ್, ಪ್ರಮಾಣ ಪತ್ರ, ಟಿಡಿಆರ್ ನೀಡಿದ್ದೇನೆ. ಕೆಲವರು 35% ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ಪಡೆದರೆ, ಮತ್ತೆ ಕೆಲವರು ಟಿಡಿಆರ್, ಚೆಕ್ ಮೂಲಕ ಹಣ ಪಡೆದಿದ್ದಾರೆ ಎಂದರು.

ಕಂದಾಯ ಭೂಮಿ ಇದ್ದ ಕಡೆ ಮಾರುಕಟ್ಟೆ ಮೌಲ್ಯದ ಮೂರು ಪಟ್ಟು ಹಣ ನೀಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಪಟ್ಟು ನೀಡಿದ್ದೇವೆ. 650ಕ್ಕೂ ಹೆಚ್ಚು ಜನ ಒಮ್ಮತದಿಂದ ಭೂಮಿ ಬಿಟ್ಟುಕೊಟ್ಟು ಪರಿಹಾರ ಪಡೆಯುತ್ತಿದ್ದಾರೆ, ಇದರಲ್ಲಿ 400 ಜನರಿಗೆ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.

ಕೆಲವರಿಗೆ ಟಿಡಿಆರ್ ವಿಚಾರದಲ್ಲಿ ಗೊಂದಲ ಇತ್ತು. ಬಿಡಿಎ ವ್ಯಾಪ್ತಿಯಲ್ಲಿ ಇರುವ ಜಾಗದಲ್ಲಿ ಬಿಡಿಎ ಟಿಡಿಆರ್ ವಿತರಣೆ ಮಾಡಿದರೆ, ಜಿಬಿಎ ವ್ಯಾಪ್ತಿಯಲ್ಲಿ ಬರುವ ಜಾಗಕ್ಕೆ ಜಿಬಿಎ ಟಿಡಿಆರ್ ವಿತರಣೆ ಮಾಡಲಿದೆ. ಹತ್ತು ದಿನದಲ್ಲಿ ಈ ಟಿಡಿಆರ್ ಅನ್ನು ನೀಡಬೇಕು ಎಂದು ನಿರ್ದೇಶನ ನೀಡಿದ್ದೇನೆ. ಅವರೇ ಮಾರುಕಟ್ಟೆ ಮೌಲ್ಯದಲ್ಲಿ ಎರಡುಪಟ್ಟು ನೀಡಲಾಗುವುದು ಎಂದರು

2 ದಿನಗಳಲ್ಲಿ ಇ ಖಾತಾ ಅರ್ಜಿ ವಿಲೇವಾರಿಗೆ ಸೂಚನೆ

“ಇ ಖಾತೆ ವಿಚಾರದಲ್ಲಿ ತೊಂದರೆ ಎದುರಾಗುತ್ತಿದೆ ಎಂಬ ಮನವಿ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಇ ಖಾತಾ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಯಾರೇ ಅರ್ಜಿ ಹಾಕಿದರೂ 2 ದಿನಗಳಲ್ಲಿ ತೀರ್ಮಾನ ಮಾಡಬೇಕು. ಏನಾದರೂ ಸಮಸ್ಯೆ ಇದ್ದರೆ ನೂರು ಜನರ ಪರಿಶೀಲನಾ ತಂಡವನ್ನು ರಚಿಸಲಾಗಿದ್ದು, ಅವರು ಪರಿಶೀಲನೆ ಮಾಡಲಿದ್ದಾರೆ. 24 ಗಂಟೆ ಒಳಗೆ 60% ಇ ಖಾತಾ ವಿತರಣೆ ಮಾಡುವ ವ್ಯವಸ್ಥೆ ನಡೆಯುತ್ತಿದೆ. 9.34 ಲಕ್ಷ ಅರ್ಜಿಗಳ ಪೈಕಿ 9.31 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ತಿಳಿಸಿದರು.

10 ನಾಗರಿಕಸ್ನೇಹಿ ಕೇಂದ್ರ ಸ್ಥಾಪನೆ

“ಬಿ ಖಾತಾಯಿಂದ ಎ  ಖಾತಾ ಪರಿವರ್ತನೆ ವಿಚಾರದಲ್ಲಿ 7 ಸಾವಿರ ಜನ ಅರ್ಜಿ ನೀಡಿದ್ದು, ಅವರು ನಕ್ಷೆ ನೀಡಬೇಕಿತ್ತು. ಈಗ ನಮ್ಮ ಅಧಿಕಾರಿಗಳೇ ಸ್ಥಳಕ್ಕೆ ಹೋಗಿ ನಕ್ಷೆ ರೂಪಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದೇನೆ. ಜಿಬಿಎ ಹಾಗೂ ಪಾಲಿಕೆಗಳು 15 ದಿನಗಳಲ್ಲಿ ಬಿ ಖಾತಾಯಿಂದ ಎ ಖಾತಾ ಅನುಮೋದನೆ ಮಾಡಬೇಕು ಎಂದು ಸೂಚಿಸಲಾಗಿದೆ” ಎಂದು ತಿಳಿಸಿದರು.

“300 ಅರ್ಜಿಗಳನ್ನು ನಕ್ಷೆ ಹೊರತಾಗಿಯೂ ಅನುಮೋದನೆ ಮಾಡಲಾಗಿದೆ. ನಕ್ಷೆ ಒದಗಿಸಲು ಆಗದವರಿಗೆ 15 ದಿನಗಳಲ್ಲಿ ಆನ್ಲೈನ್ ಮೂಲಕ ಶುಲ್ಕ ಕಟ್ಟಿಸಿಕೊಂಡು ಖಾತಾ ಬದಲಾವಣೆ ಮಾಡಲು ನಿರ್ಧರಿಸಿದ್ದೇವೆ. ಖಾತಾ ಬದಲಾವಣೆಗೆ 1.20 ಲಕ್ಷ ಅರ್ಜಿಗಳು ಬಂದಿದ್ದು, 86% ವಿಲೇವಾರಿ ಮಾಡಲಾಗಿದ್ದು, 18 ಸಾವಿರ ಅರ್ಜಿಗಳು ಬಾಕಿ ಇವೆ. ಮುಂದಿನ ಮೂರು ವಾರದಲ್ಲಿ ಈ ಅರ್ಜಿಗಳ ವಿಲೇವಾರಿ ಆಗಲಿದೆ. 1.02 ಲಕ್ಷ ಅರ್ಜಿ ಪೈಕಿ 56 ಸಾವಿರ ಅರ್ಜಿಗಳು ಅನುಮೋದನೆ ಪಡೆದಿದ್ದು, 46 ಸಾವಿರ ಅರ್ಜಿಗಳು ವಜಾಗೊಂಡಿವೆ. ವಜಾಗೊಂಡ ಅರ್ಜಿಗಳನ್ನು ಮತ್ತೆ ಪರಿಶೀಲಿಸಿ ವಜಾಗೊಳ್ಳಲು ಕಾರಣ ಪತ್ತೆ ಮಾಡಲಾಗುವುದು” ಎಂದು ವಿವರಿಸಿದರು.

“ಪಾಸ್ ಪೋರ್ಟ್ ಸೇವಾ ಕೇಂದ್ರ ಮಾದರಿಯಲ್ಲಿ ಖಾತಾ ವಿಚಾರದಲ್ಲಿ ನಾಗರೀಕ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ. ಒಂದು ವಲಯಕ್ಕೆ ಒಂದು ಕೇಂದ್ರದಂತೆ ಜಿಬಿಎ ಈ ಕೇಂದ್ರ ಆರಂಭಿಸಲಿದೆ. ನಾಗರೀಕ ಸ್ನೇಹಿಯಾಗಿ ಒಂದೇ ಕಡೆ ಎಲ್ಲಾ ಸೇವೆ ಒದಗಿಸಲು ವಿಶ್ವದರ್ಜೆ ಕೇಂದ್ರ ಸ್ಥಾಪಿಸಲಾಗುವುದು. 31.03.2026ಕ್ಕೆ ಚಾಲನೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

“ಪರಿವರ್ತನೆಯಾದ ನಿವೇಶನ ಮಾರಾಟವಾಗುತ್ತಿಲ್ಲ ಎಂಬ ವಿಚಾರ ಚರ್ಚೆ ಮಾಡಲಾಗಿದೆ. ಕಾನೂನು ಪ್ರಕಾರ ಬಡಾವಣೆ ನಿರ್ಮಿಸಬೇಕಿದ್ದು, ಆರ್ ಟಿಸಿ ಆಧಾರದ ಮೇಲೆ ಖಾತಾ ಪರಿವರ್ತನೆ ಮಾಡಬಹುದು ಎಂದು ಸೂಚಿಸಿದ್ದೇನೆ” ಎಂದರು.

ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಡೆನ್ಮಾರ್ಕ್, ದಕ್ಷಿಣ ಆಫ್ರಿಕಾ ಉತ್ಸುಕ

“ಡೆನ್ಮಾರ್ಕ್ ಉಪ ಮುಖ್ಯಸ್ಥರಾದ ಮಾಟೀನ್ ಪೀಟರ್ಸನ್ ಹಾಗೂ ದಕ್ಷಿಣ ಆಫ್ರಿಕಾ ಹೈ ಕಮಿಷನರ್ ಅವರು ಇಂದು ನನ್ನನ್ನು ಭೇಟಿ ಮಾಡಿದರು. ಈ ಇಬ್ಬರು ನಮ್ಮ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಉದ್ಯಮಗಳ ಆರಂಭಕ್ಕೆ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ, ತಂತ್ರಜ್ಞಾನ, ಆವಿಷ್ಕಾರ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜೊತೆ ಉತ್ತಮ ಬಾಂಧವ್ಯ ಬೆಳೆಸಲು ಇಂದು ಭೇಟಿ ಮಾಡಿದ್ದಾರೆ. ನಮ್ಮ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ. ಡೆನ್ಮಾರ್ಕ್ ನವರು ದೆಹಲಿ ಬಿಟ್ಟರೆ ಈ ದೇಶದಲ್ಲಿ ಕಚೇರಿ ಹೊಂದಿರುವುದು ಬೆಂಗಳೂರಿನಲ್ಲಿ ಮಾತ್ರ” ಎಂದು ತಿಳಿಸಿದರು.

“ನಾವು ಮೊದಲು ಮೂಲ ಆಸ್ತಿಯನ್ನು ಸರಿಪಡಿಸುತ್ತಿದ್ದು, ಕಟ್ಟಡಗಳ ವಿಚಾರಕ್ಕೆ ಇನ್ನು ಮುಂದಾಗಿಲ್ಲ. ಕಟ್ಟಡಗಳನ್ನು ಅಧಿಕೃತಗೊಳಿಸಲು ಸಧ್ಯಕ್ಕೆ ನಮ್ಮ ಬಳಿ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರ ಇದೆ. ಹೀಗಾಗಿ ನಾವು ಆಸ್ತಿಗಳನ್ನು ಸರಿಪಡಿಸುತ್ತಿದ್ದೇವೆ. ಬೋಗಸ್ ನೋಂದಣಿ ಆಗಿದ್ದರೆ ಅವುಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಬಜೆಟ್ ನಲ್ಲಿ ಅನುದಾನ ನೀಡಲಾಗುವುದೇ ಎಂದು ಕೇಳಿದಾಗ, “ಅದರ ಅವಶ್ಯಕತೆ ಇಲ್ಲ. ಈಗಾಗಲೇ ಹುಡ್ಕೋ ಮೂಲಕ 26 ಸಾವಿರ ಕೋಟಿ ಸಾಲ ಪಡೆದಿದ್ದೇವೆ. ಇಂದಿನ ಸಭೆಯಲ್ಲಿ ಪರಿಶೀಲನೆ ಮಾಡಿದ ಬಳಿಕ ಇದರಲ್ಲಿ ಹಣ ಉಳಿಯುವ ಸಾಧ್ಯತೆ ಇದೆ” ಎಂದು ತಿಳಿಸಿದರು.

ಟನಲ್ ರಸ್ತೆ ಹಾಗೂ ಬೆಂಗಳೂರಿಗೆ ಕೇಂದ್ರ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡಿಲ್ಲ ಎಂದು ಕೇಳಿದಾಗ, “ಕೇಂದ್ರ ಬಜೆಟ್ ನಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ, ಸಹಾಯ ಮಾಡಿಲ್ಲ. ಟನಲ್ ರಸ್ತೆ ವಿಚಾರದಲ್ಲಿ ಬಿಲ್ಡ್ ಆಪರೇಟ್ ಮಾದರಿ ಇದ್ದು, ಸರ್ಕಾರ ಕೇವಲ 40% ಮಾತ್ರ ನೀಡಲಿದೆ. ನಾವು ಬೇರೆ ರಾಜ್ಯಗಳ ಯೋಜನೆ ನೋಡಿದ್ದೇವೆ. ಇಲ್ಲಿ ಯೋಜನೆ ಮಾಡುವವರೇ ರಿಸ್ಕ್ ತೆಗೆದುಕೊಳ್ಳಬೇಕು” ಎಂದರು.

2-3 ವರ್ಷಗಳಲ್ಲಿ ನಮ್ಮ ಬದಲಾವಣೆ ಗೋಚರ

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಳಿದಾಗ, “ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ನಾನು ಯಾವೆಲ್ಲ ಯೋಜನೆ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆನೋ, ಎಲ್ಲವನ್ನು ಮುಂದಿನ ಎರಡೂವರೆ ವರ್ಷದಲ್ಲಿ ಅಂತಿಮ ಹಂತಕ್ಕೆ ತರಲಾಗುವುದು. ನಾನು ಸುಮ್ಮನೆ ಯಾವುದೇ ಆಶ್ವಾಸನೆ ನೀಡಿಲ್ಲ. ಕರ್ನಾಟಕ ಹಾಗೂ ಬೆಂಗಳೂರಿನ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಮಾಡಲಾಗಿದ್ದು, ಮುಂದಿನ ಎರಡು ಮೂರು ವರ್ಷಗಳ ನಂತರ ಬದಲಾವಣೆ ಗೋಚರಿಸುತ್ತವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments